ಬಿಜೆಪಿ, ನಿತೀಶ್ ಕುಮಾರ್ ಬಿಹಾರವನ್ನು ಭಾರತದ ಅಪರಾಧದ ರಾಜಧಾನಿಯನ್ನಾಗಿಸಿದ್ದಾರೆ: ರಾಹುಲ್ ಗಾಂಧಿ

ರಾಹುಲ್ ಗಾಂಧಿ
ಹೊಸದಿಲ್ಲಿ: ಖ್ಯಾತ ಉದ್ಯಮಿ ಗೋಪಾಲ್ ಖೇಮ್ಕಾ ತಮ್ಮ ಪಟ್ನಾ ನಿವಾಸದೆದುರೇ ಹತ್ಯೆಯಾದ ಬೆನ್ನಿಗೇ, ರವಿವಾರ ಬಿಹಾರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಈ ಘಟನೆಯಿಂದ ಬಿಜೆಪಿ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಬ್ಬರೂ ಬಿಹಾರವನ್ನು ಭಾರತದ ಅಪರಾಧದ ರಾಜಧಾನಿಯನ್ನಾಗಿಸಿರುವುದು ದೃಢಪಟ್ಟಿದೆ” ಎಂದು ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಲೋಕಸಭಾ ವಿಪಕ್ಷ ನಾಯಕರೂ ಆದ ರಾಹುಲ್ ಗಾಂಧಿ, “ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಯಾಗಲಿರುವ ಮತ ಕೇವಲ ಸರಕಾರವನ್ನು ಬದಲಿಸಲು ಮಾತ್ರವಲ್ಲ; ಬದಲಿಗೆ, ರಾಜ್ಯವನ್ನು ರಕ್ಷಿಸಲೂ ಕೂಡಾ ಆಗಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
“ಬಿಹಾರವಿಂದು ಲೂಟಿ, ಗುಂಡೇಟು ಹಾಗೂ ಹತ್ಯೆಗಳ ನೆರಳಿನಲ್ಲಿ ಬದುಕುತ್ತಿದೆ. ಅಪರಾಧ ಇಲ್ಲಿ ಸಹಜ ರೂಢಿಯಾಗಿದ್ದು, ಸರಕಾರ ಸಂಪೂರ್ಣವಾಗಿ ವಿಫಲಗೊಂಡಿದೆ” ಎಂದೂ ಅವರು ಟೀಕಾಪ್ರಹಾರ ನಡೆಸಿದ್ದಾರೆ.
ಖೇಮ್ಕಾರನ್ನು ಅವರ ಪಟ್ನಾದ ನಿವಾಸದ ಹೊರಗೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ. ಏಳು ವರ್ಷಗಳ ಹಿಂದೆ ಗೋಪಾಲ್ ಖೇಮ್ಕಾ ಅವರ ಪುತ್ರನನ್ನೂ ಹಾಜಿಪುರದಲ್ಲಿ ಹತ್ಯೆಗೈಯಲಾಗಿತ್ತು.
ಈ ಘಟನೆ ಶನಿವಾರ ರಾತ್ರಿ ಸುಮಾರು 11.40ರ ವೇಳೆಗೆ ನಡೆದಿದ್ದು, ಗಾಂಧಿ ಮೈದಾನ ಪ್ರದೇಶದಲ್ಲಿರುವ ತಮ್ಮ ನಿವಾಸದ ಗೇಟಿನ ಬಳಿ ಖೇಮ್ಕಾ ಕಾರಿನಿಂದ ಇನ್ನೇನು ಕೆಳಗಿಳಿಯಬೇಕು ಎನ್ನುವಾಗ ಈ ಘಟನೆ ನಡೆದಿದೆ.