ವಂದೇಮಾತರಂ ಮೊದಲ 2 ಚರಣ ಹಾಡುವ ಕಾಂಗ್ರೆಸ್ ನಿರ್ಧಾರವನ್ನು ಖಂಡಿಸಿ ನಿರ್ಣಯ ಅಂಗೀಕರಿಸಿದ ಬಿಜೆಪಿ

Photo Credit : X/@PTI_News
ಹೊಸದಿಲ್ಲಿ: ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ತೆಗೆದುಕೊಂಡ ನಿರ್ಧಾರವನ್ನು ಖಂಡಿಸಿ ಬಿಜೆಪಿ ಶನಿವಾರ ನಿರ್ಣಯ ಅಂಗೀಕರಿಸಿದೆ. ವಂದೇ ಮಾತರಂನ ಸಂಪೂರ್ಣ ಆವೃತ್ತಿಯ ಗೌರವವನ್ನು ಎತ್ತಿಹಿಡಿಯಲು ನಿರ್ಧರಿಸಿರುವ ಬಿಜೆಪಿ, ದೇಶಾದ್ಯಂತ ಅರಿವು ಮೂಡಿಸುವ ಅಭಿಯಾನ ನಡೆಸಲು ತೀರ್ಮಾನಿಸಿದೆ.
ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ಅಧ್ಯಕ್ಷತೆಯಲ್ಲಿ ಹೊಸದಾಗಿ ನೇಮಕಗೊಂಡ ರಾಷ್ಟ್ರೀಯ ಪದಾಧಿಕಾರಿಗಳ ಮೊದಲ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಗೆ ಮುನ್ನ ಬಿಜೆಪಿ ನಾಯಕರು ‘ವಂದೇ ಮಾತರಂ’ನ ಎಲ್ಲಾ ಆರು ಚರಣಗಳನ್ನು ಹಾಡಿದರು.
ತನ್ನ ನಿರ್ಣಯದಲ್ಲಿ ಬಿಜೆಪಿ, ಆರು ಚರಣಗಳನ್ನು ಒಳಗೊಂಡ ‘ವಂದೇ ಮಾತರಂ’ನ ಸಂಪೂರ್ಣ ಆವೃತ್ತಿಯು ಭಾರತದ ರಾಷ್ಟ್ರೀಯ ಪ್ರಜ್ಞೆ ಮತ್ತು ಸ್ವಾತಂತ್ರ್ಯ ಹೋರಾಟದ ಪರಂಪರೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದೆ.
ರಾಷ್ಟ್ರೀಯ ಗೀತೆಯನ್ನು ಕೋಮುವಾದಿ ಒತ್ತಡಗಳು, ರಾಜಕೀಯ ಓಲೈಕೆ ಅಥವಾ ಮತಬ್ಯಾಂಕ್ ರಾಜಕಾರಣಕ್ಕೆ ಒಳಪಡಿಸುವ ಯಾವುದೇ ಯತ್ನವನ್ನು ತೀವ್ರವಾಗಿ ವಿರೋಧಿಸುವುದಾಗಿ ಬಿಜೆಪಿ ತಿಳಿಸಿದೆ.
ಇದೇ ವೇಳೆ, ಯುವ ಪೀಳಿಗೆಗೆ ‘ವಂದೇ ಮಾತರಂ’ ಗೀತೆಯ ಇತಿಹಾಸ, ಮಹತ್ವ ಮತ್ತು ಪರಂಪರೆಯ ಬಗ್ಗೆ ಅರಿವು ಮೂಡಿಸಲು ವಿಶೇಷ ಗಮನ ಹರಿಸಿ ದೇಶಾದ್ಯಂತ ಅಭಿಯಾನ ನಡೆಸುವುದಾಗಿ ಪಕ್ಷ ಘೋಷಿಸಿದೆ.
ಮಹಾತ್ಮ ಗಾಂಧಿಯವರು ‘ವಂದೇ ಮಾತರಂ’ ಅನ್ನು ಅತ್ಯಂತ ಪವಿತ್ರ ರಾಷ್ಟ್ರೀಯ ಭಾವನೆಯುಳ್ಳ, ಸಾಮ್ರಾಜ್ಯಶಾಹಿ ವಿರೋಧಿ ಘೋಷಣೆ ಎಂದು ಬಣ್ಣಿಸಿದ್ದರು ಎಂದು ಬಿಜೆಪಿ ತನ್ನ ನಿರ್ಣಯದಲ್ಲಿ ಉಲ್ಲೇಖಿಸಿದೆ.






