'ಬೌದ್ಧಿಕ ನಕ್ಸಲರ' ಬಗ್ಗೆ ಎಚ್ಚರ ವಹಿಸಿ: ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್
"ಸರಕಾರದ ಕೆಲಸಗಳು, ಕಲ್ಯಾಣ ಯೋಜನೆಗಳ ಮೂಲಕ ಅವರಿಗೆ ತಕ್ಕ ಪಾಠ ಕಲಿಸಲಾಗುವುದು"

ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ (Photo: PTI)
ರಾಯಗಢ: ಕಾಡುಗಳಲ್ಲಿ ಸಶಸ್ತ್ರ ನಕ್ಸಲರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. ಆದರೆ, ವಿವಿಧ ಸಂಘಟನೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿರುವ ಕೆಲವು 'ಬೌದ್ಧಿಕ ನಕ್ಸಲರು' (Dimagi Naxals) ಇನ್ನೂ ಸಕ್ರಿಯರಾಗಿದ್ದಾರೆ. ಇಂತಹವರ ಬಗ್ಗೆ ಜನರು ಎಚ್ಚರಿಕೆಯಿಂದರಬೇಕು ಎಂದು ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಹೇಳಿದ್ದಾರೆ.
ಸರಕಾರದ ಅಭಿವೃದ್ಧಿ ಕೆಲಸಗಳು ಮತ್ತು ಕಲ್ಯಾಣ ಯೋಜನೆಗಳ ಮೂಲಕ ಅವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನದ ಅಂಗವಾಗಿ ಛತ್ತೀಸ್ ಗಢದ ರಾಯಗಢ ಜಿಲ್ಲೆಯ ಧರಮ್ ಜೈಗಢ ಪಟ್ಟಣದಲ್ಲಿ ರವಿವಾರ ಆಯೋಜಿಸಿದ್ದ 'ಜನಜಾತಿಯ ಗೌರವ ದಿವಸ' ಕಾರ್ಯಕ್ರಮವನ್ನುದ್ದೇಶಿಸಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಲು ನಬಿನ್ ಉದ್ದೇಶಿಸಿದ್ದರು. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ಅವರ ವಿಮಾನ ಇಳಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಭೇಟಿ ರದ್ದುಗೊಂಡಿತು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದಿಂದ ನಕ್ಸಲಿಸಂ ನಿರ್ಮೂಲನೆ ಮಾಡುವ ಸಂಕಲ್ಪ ತೊಟ್ಟಿದ್ದಾರೆ. ಈ ಗುರಿ ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾರ್ಯನಿರ್ವಹಿಸುತ್ತಿವೆ ಎಂದು ನಬಿನ್ ಹೇಳಿದರು.
ಛತ್ತೀಸ್ ಗಢವನ್ನು ನಕ್ಸಲಿಸಂ ಮುಕ್ತಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಮತ್ತು ಅವರ ತಂಡದ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಮಾವೋವಾದಿಗಳ ವಿರುದ್ಧದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಿದರು.
"ಬಸ್ತಾರ್ ನ ಕೆಲವು ಭಾಗಗಳಲ್ಲಿ ಹಿಂದೆ ಜನರಿಗೆ ಬಂದೂಕು ಬಳಸುವ ತರಬೇತಿ ನೀಡಲಾಗುತ್ತಿತ್ತು. ಆದರೆ, ಈಗ ಆ ಪ್ರದೇಶಗಳು ಆಟದ ಮೈದಾನಗಳಾಗಿ ಬದಲಾಗಿವೆ. ಅಲ್ಲಿನ ಮಕ್ಕಳು ಕ್ರೀಡೆ ಮತ್ತು ಶಿಕ್ಷಣದತ್ತ ಗಮನ ಹರಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ" ಎಂದು ಹೇಳಿದರು.
ಮೂರು ವರ್ಗದ ಜನರ ಬಗ್ಗೆ ಎಚ್ಚರಿಕೆ
ಕಾಡುಗಳಿಂದ ಸಶಸ್ತ್ರ ನಕ್ಸಲರನ್ನು ನಿರ್ಮೂಲನೆ ಮಾಡಲಾಗಿದ್ದರೂ, ಸಮಾಜದ ವಿವಿಧ ಸಂಘಟನೆಗಳಲ್ಲಿ ನಾಯಕತ್ವದ ಸ್ಥಾನಗಳನ್ನು ಹೊಂದಿರುವ ಕೆಲವು 'ಬೌದ್ಧಿಕ ನಕ್ಸಲರು' ಇನ್ನೂ ಸಕ್ರಿಯರಾಗಿದ್ದಾರೆ ಎಂದು ನಬಿನ್ ಆರೋಪಿಸಿದರು.
ಇಂತಹವರಲ್ಲಿ ಮೂರು ವರ್ಗದ ಜನರಿದ್ದು, ಅವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ನಗರಗಳ ಹವಾನಿಯಂತ್ರಿತ (AC) ಕೊಠಡಿಗಳಲ್ಲಿ ಕುಳಿತು ನೀತಿಗಳನ್ನು ರೂಪಿಸುವುದರ ಜೊತೆಗೆ ಮಕ್ಕಳಿಗೆ ಕ್ರಾಂತಿಯ ಬಗ್ಗೆ ಮಾತನಾಡಲು ಪ್ರೇರೇಪಿಸುವವರು ಮೊದಲ ವರ್ಗದವರು. ಸಂವಿಧಾನದ ಹೆಸರಿನಲ್ಲಿ ಪ್ರಜಾಪ್ರಭುತ್ವದ ವಿರುದ್ಧ ಜನರನ್ನು ಪ್ರಚೋದಿಸುವವರು ಎರಡನೇ ವರ್ಗದವರು. ಇಂತಹ 'ಬೌದ್ಧಿಕ ನಕ್ಸಲರಿಗೆ' ವಿವಿಧ ಸಂಘಟನೆಗಳ ಮೂಲಕ ಬೆಂಬಲ ನೀಡುವವರು ಮೂರನೇ ವರ್ಗದವರು ಎಂದು ಅವರು ವಿವರಿಸಿದರು.
"ಈ ಮೂರು ವರ್ಗದ ಜನರ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಸರಕಾರ ತನ್ನ ಕೆಲಸಗಳು ಮತ್ತು ಕಲ್ಯಾಣ ಯೋಜನೆಗಳ ಮೂಲಕ ಈ 'ಬೌದ್ಧಿಕ ನಕ್ಸಲರಿಗೆ' ತಕ್ಕ ಪಾಠ ಕಲಿಸಲಿದೆ" ಎಂದು ನಬಿನ್ ಹೇಳಿದರು.
ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ನಬಿನ್, ದಶಕಗಳಿಂದ ಬುಡಕಟ್ಟು ಸಮುದಾಯವನ್ನು ಮುಖ್ಯವಾಹಿನಿಯಿಂದ ದೂರವಿಟ್ಟ ಕಾಂಗ್ರೆಸ್, ರಾಜಕೀಯ ಉದ್ದೇಶಗಳಿಗಾಗಿ ಅವರ ಮತಗಳನ್ನು ಮಾತ್ರ ಬಳಸಿಕೊಂಡಿದೆ ಎಂದು ಆರೋಪಿಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯವನ್ನು ಸ್ಥಾಪಿಸಲಾಯಿತು ಎಂದು ಅವರು ಸ್ಮರಿಸಿದರು.
"ಬಿಜೆಪಿ ಬುಡಕಟ್ಟು ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡುವುದಷ್ಟೇ ಅಲ್ಲದೆ, ಆ ಸಮುದಾಯದವರಿಗೆ ನಾಯಕತ್ವದ ಜವಾಬ್ದಾರಿಗಳನ್ನೂ ನೀಡುತ್ತದೆ" ಎಂದು ಪ್ರತಿಪಾದಿಸಿದರು.
ಕೇಂದ್ರ ಮತ್ತು ಛತ್ತೀಸ್ಗಢದ ಬಿಜೆಪಿ ಸರಕಾರಗಳು ಬುಡಕಟ್ಟು ಜನರ ಜೀವನಮಟ್ಟ ಸುಧಾರಿಸಲು ಹಾಗೂ ಅಭಿವೃದ್ಧಿಯ ಪ್ರಯೋಜನಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಲು ಬದ್ಧವಾಗಿವೆ ಎಂದು ನಬಿನ್ ಹೇಳಿದರು.







