SIR ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಬಿಜೆಪಿ ಸಿದ್ಧ, ವಿಶೇಷ ಅಧಿವೇಶನ ಕರೆಯಿರಿ: ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಗೆ ಅಮಿತ್ ಶಾ ಸವಾಲು

ರಾಹುಲ್ ಗಾಂಧಿ , ಅಮಿತ್ ಶಾ | Photo Credit : PTI
ಲಕ್ನೋ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಸಲು ಬಿಜೆಪಿ ಸಿದ್ಧವಿದೆ. ಈ ಸಂಬಂಧ ವಿಶೇಷ ಅಧಿವೇಶನ ಕರೆಯುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಸವಾಲು ಹಾಕಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದಿಂದ ‘ಸಾರ್ವಜನಿಕ ದೋಷಾರೋಪಣೆ’ (ಪಬ್ಲಿಕ್ ಇಂಪೀಚ್ಮೆಂಟ್) ನಡೆಸಲು ಸಿದ್ಧತೆ ನಡೆಸಿರುವ ಹೊತ್ತಿನಲ್ಲೇ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ.
ಲಕ್ನೋದಲ್ಲಿ ನಡೆದ ಉತ್ತರ ಪ್ರದೇಶ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ‘ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಇಬ್ಬರಿಗೂ ಇಲ್ಲೇ, ಈಗಲೇ ಸವಾಲು ಹಾಕುತ್ತೇನೆ. ಸಂಸತ್ತಿನಲ್ಲಿ ಈ ವಿಷಯದ ಕುರಿತು ಚರ್ಚಿಸಲು ಬಿಜೆಪಿ ಸಂಪೂರ್ಣ ಸಿದ್ಧವಾಗಿದೆ. ನಮಗೆ ಮುಚ್ಚಿಡಲು ಏನೂ ಇಲ್ಲ. ಸಂಸತ್ತಿನ ವಿಶೇಷ ಅಧಿವೇಶನ ಕರೆಯೋಣ’ ಎಂದು ಹೇಳಿದರು.
‘ಆದರೆ, ಅವರಿಗೆ ಸಂಸತ್ತಿನಲ್ಲಿ ಈ ವಿಷಯದ ಕುರಿತು ಮಾತನಾಡುವ ಉದ್ದೇಶವಿಲ್ಲ. ಸಂಸತ್ತಿನ ಕಲಾಪ ನಡೆಯಲು ಅವಕಾಶ ನೀಡದೆ ಗದ್ದಲ ಸೃಷ್ಟಿಸುವುದಷ್ಟೇ ಅವರ ಉದ್ದೇಶ’ ಎಂದು ವಿರೋಧ ಪಕ್ಷಗಳನ್ನು ಟೀಕಿಸಿದರು.
‘ರಾಹುಲ್ ಗಾಂಧಿಯವರಿಗೆ ಸಂಸತ್ತಿನಲ್ಲಿ ಈ ವಿಷಯವನ್ನು ಎಂದಿಗೂ ಚರ್ಚಿಸುವುದಿಲ್ಲ. ಬದಲಾಗಿ, ಬೀದಿಗಳಲ್ಲಿ ಗದ್ದಲ ಸೃಷ್ಟಿಸುತ್ತಾರೆ’ ಎಂದು ಶಾ ಆರೋಪಿಸಿದರು.
ಹರಿಯಾಣ, ಮಹಾರಾಷ್ಟ್ರ, ಬಿಹಾರ, ದಿಲ್ಲಿ, ಪುದುಚೇರಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದನ್ನು ಉಲ್ಲೇಖಿಸಿದ ಅಮಿತ್ ಶಾ, ‘ಬಂಗಾಳದಲ್ಲಿನ ಘಟನೆಗಳ ಬಳಿಕ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅವರಿಗೆ ಅರಿವಾಗಿದೆ. ಸೋಲನ್ನು ಒಪ್ಪಿಕೊಳ್ಳುವ ಬದಲು ಅಂಪೈರ್ ವಿರುದ್ಧವೇ ಮೋಸದ ಆರೋಪ ಮಾಡುತ್ತಿದ್ದಾರೆ. ಮತಗಳನ್ನು ಕಳವು ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ’ ಎಂದರು.
ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, SIR ಪ್ರಕ್ರಿಯೆಯನ್ನು ಅಮಾನತುಗೊಳಿಸಬೇಕು ಮತ್ತು SIRಗೂ ಮುನ್ನ ಇದ್ದ ಮತದಾರರ ಪಟ್ಟಿಯನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿ ಇಂಡಿಯಾ ಮೈತ್ರಿಕೂಟವು ಅಕ್ಟೋಬರ್ ಆರಂಭದಿಂದಲೇ ಪ್ರತಿಭಟನೆ ನಡೆಸುತ್ತಿದೆ. ಈ ಪ್ರಕ್ರಿಯೆಯಲ್ಲಿ ಸುಮಾರು 13 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದು SIRಗೂ ಮುನ್ನ ಇದ್ದ ಒಟ್ಟು ಮತದಾರರ ಸಂಖ್ಯೆಯ ಶೇ. 14ರಷ್ಟಾಗಿದೆ.






