ಪಂಜಾಬ್ ಸೇರಿ ನಾಲ್ಕು ರಾಜ್ಯ ಘಟಕಗಳ ಪುನರ್ರಚನೆ: ಜಾಟ್ ಸಿಕ್ಖ್ ನಾಯಕ ಧಿಲ್ಲಾನ್ಗೆ ಬಿಜೆಪಿ ಅಧ್ಯಕ್ಷ ಪಟ್ಟ

Photo Credit : timesofindia
ಹೊಸದಿಲ್ಲಿ: ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಪಂಜಾಬ್ ಸೇರಿದಂತೆ ನಾಲ್ಕು ರಾಜ್ಯ ಘಟಕಗಳನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಪುನರ್ರಚಿಸಿದ್ದು, ಪಂಜಾಬ್ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ಜಾಟ್ ಸಿಕ್ಖ್ ಸಮುದಾಯದ ಮುಖಂಡ ಕೇವಲ್ ಸಿಂಗ್ ಧಿಲ್ಲಾನ್ ಅವರನ್ನು ನೇಮಕ ಮಾಡಿದೆ.
ಮಾಲ್ವಾ ಪ್ರದೇಶದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಜಾಟ್ ಸಿಕ್ಖ್ ಸಮುದಾಯವನ್ನು ಸೆಳೆಯುವ ಪಕ್ಷದ ಕಾರ್ಯತಂತ್ರದ ಭಾಗವಾಗಿ ಈ ನೇಮಕ ನಡೆದಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಅಂತೆಯೇ, ಕೇಂದ್ರ ಸಚಿವ ಹರ್ಷ ಮಲ್ಹೋತ್ರಾ ಅವರನ್ನು ದಿಲ್ಲಿ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹರಿಯಾಣ ಹಾಗೂ ತ್ರಿಪುರಾ ರಾಜ್ಯ ಘಟಕಗಳಲ್ಲಿಯೂ ಸಂಘಟನಾ ಪುನರ್ರಚನೆ ಕೈಗೊಳ್ಳಲಾಗಿದೆ.
ತ್ರಿಕೋನ ಸ್ಪರ್ಧೆ ಇರುವ ಪಂಜಾಬ್ನಲ್ಲಿ ಜಾಟ್ ಸಿಕ್ಖ್ ಸಮುದಾಯವು ಪ್ರಮುಖ ರಾಜಕೀಯ ಹಾಗೂ ಸಾಮಾಜಿಕ ಪ್ರಭಾವ ಹೊಂದಿದೆ. ಮುಖ್ಯವಾಗಿ ಕೃಷಿಯನ್ನು ಆಧರಿಸಿರುವ ಈ ಸಮುದಾಯದ ಬೆಂಬಲವನ್ನು ಗಳಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ. 2021ರಲ್ಲಿ ರೈತರ ತೀವ್ರ ಪ್ರತಿಭಟನೆಯ ಬಳಿಕ ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ಹಿಂಪಡೆದಿತ್ತು. ರೈತರ ಅಸಮಾಧಾನವನ್ನು ತಗ್ಗಿಸುವ ಪ್ರಯತ್ನದ ಭಾಗವಾಗಿಯೂ ಧಿಲ್ಲಾನ್ ಅವರಿಗೆ ರಾಜ್ಯ ಘಟಕದ ನೇತೃತ್ವ ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿ ಭಗವಂತ್ ಮಾನ್, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಹಾಗೂ ಶಿರೋಮಣಿ ಅಕಾಲಿದಳದ ನಾಯಕ ಸುಖಬೀರ್ ಸಿಂಗ್ ಬಾದಲ್ ಕೂಡ ಇದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಗರ ಪ್ರದೇಶಗಳ ಹಿಂದೂ ಮತಬ್ಯಾಂಕ್ ಅನ್ನು ಮುಖ್ಯವಾಗಿ ಅವಲಂಬಿಸಿರುವ ಬಿಜೆಪಿ, ಸಿಕ್ಖ್ ಸಮುದಾಯದ ಬೆಂಬಲ ಪಡೆಯಲು ಪ್ರಯತ್ನಿಸುತ್ತಿದೆ.
76 ವರ್ಷದ ಧಿಲ್ಲಾನ್ ಅವರು ಮಾಜಿ ಸಂಸದ ದಯಾ ಸಿಂಗ್ ಸೋಧಿ ಅವರ ಬಳಿಕ ಪಂಜಾಬ್ ಬಿಜೆಪಿ ಘಟಕದ ನೇತೃತ್ವ ವಹಿಸುತ್ತಿರುವ ಎರಡನೇ ಸಿಕ್ಖ್ ನಾಯಕ ಎನಿಸಿಕೊಂಡಿದ್ದಾರೆ. 2022ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಅವರು, ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಆಪ್ತ ಸಹಚರರಲ್ಲಿ ಒಬ್ಬರು.
ಧಿಲ್ಲಾನ್ ಅವರು ಸುನೀಲ್ ಜಾಖಡ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. ಮೂಲತಃ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಜಾಖಡ್, 2024ರಲ್ಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ತೊರೆಯುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಪಕ್ಷದ ವರಿಷ್ಠರು ಮನವೊಲಿಸಿದ ಹಿನ್ನೆಲೆಯಲ್ಲಿ ಅವರು ಹುದ್ದೆಯಲ್ಲಿ ಮುಂದುವರಿದಿದ್ದರು.






