West Bengal | ಮತ ಎಣಿಕೆಯ ವೇಳೆ ಉದ್ವಿಗ್ನತೆ; ಸಿಎಂ ಮಮತಾ ನಿವಾಸದ ಮುಂದೆ ಬಿಜೆಪಿ ಬೆಂಬಲಿಗರಿಂದ ʼಜೈ ಶ್ರೀರಾಮ್ʼ ಘೋಷಣೆ

ಮಮತಾ ಬ್ಯಾನರ್ಜಿ | Photo Credit : PTI
ಕೋಲ್ಕತ್ತಾ, ಮೇ 4: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವ ನಡುವೆಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದ ಹೊರಗೆ ಬಿಜೆಪಿ ಬೆಂಬಲಿಗರು ಜಮಾಯಿಸಿ ಘೋಷಣೆ ಕೂಗಿದ ಘಟನೆ ಸೋಮವಾರ ಉದ್ವಿಗ್ನತೆಗೆ ಕಾರಣವಾಯಿತು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೊಗಳಲ್ಲಿ, ಕೋಲ್ಕತ್ತಾದ ಕಾಲಿಘಾಟ್ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಸೇರಿ, ಆರಂಭಿಕ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಪಡೆಯುತ್ತಿದ್ದಂತೆ ‘ಜೈ ಶ್ರೀ ರಾಮ್’, ‘ಬಿಜೆಪಿ ಝಿಂದಾಬಾದ್’ ಮತ್ತು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗುತ್ತಿರುವುದು ಕಂಡು ಬಂದಿದೆ. ಉದ್ವಿಗ್ನತೆ ಉಲ್ಬಣಗೊಳ್ಳದಂತೆ ತಡೆಯಲು ಪೊಲೀಸರು ಮಧ್ಯಪ್ರವೇಶಿಸಿ, ಜನರ ಗುಂಪನ್ನು ಚದುರಿಸಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿದರು.
ಈ ಬೆಳವಣಿಗೆಗಳಿಗೆ ಮುನ್ನ, ವಿಜಯೋತ್ಸವದ ಸಂದರ್ಭದಲ್ಲಿ ಸಂಯಮ ಕಾಪಾಡಿಕೊಳ್ಳುವಂತೆ ಬಿಜೆಪಿಯು ತನ್ನ ಕಾರ್ಯಕರ್ತರಿಗೆ ಸೂಚನೆ ನೀಡಿತ್ತು. ತೃಣಮೂಲ ಕಾಂಗ್ರೆಸ್ ನಾಯಕರ ಮನೆಗಳ ಹೊರಗೆ ಸೇರುವುದನ್ನು ತಪ್ಪಿಸಲು, ವಸತಿ ಪ್ರದೇಶಗಳಲ್ಲಿ ಘೋಷಣೆಗಳನ್ನು ಕೂಗದಂತೆ ಹಾಗೂ ಸಂಭ್ರಮಾಚರಣೆಗಳನ್ನು ಪಕ್ಷದ ಕಚೇರಿಗಳಿಗೆ ಮಾತ್ರ ಸೀಮಿತಗೊಳಿಸುವಂತೆ ಸ್ಪಷ್ಟ ನಿರ್ದೇಶನ ನೀಡಲಾಗಿತ್ತು. ಆದರೂ ಈ ಸೂಚನೆಗಳ ನಡುವೆಯೂ ಕೆಲ ಬೆಂಬಲಿಗರು ಮುಖ್ಯಮಂತ್ರಿಯವರ ನಿವಾಸದ ಹೊರಗೆ ಜಮಾಯಿಸಿದ್ದರು.
#WATCH | West Bengal Elections 2026 | BJP workers raise slogans of 'Jai Shree Ram' outside the residence of West Bengal CM Mamata Banerjee in Kolkata. pic.twitter.com/mkJmm12dVm
— ANI (@ANI) May 4, 2026
ಮತ ಎಣಿಕೆಯ ಟ್ರೆಂಡ್ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಬಲವಾದ ಪ್ರದರ್ಶನವನ್ನು ಸೂಚಿಸುತ್ತಿದ್ದು, ಸ್ವಾತಂತ್ರ್ಯಾನಂತರ ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸುವ ಸಾಧ್ಯತೆ ಕುರಿತು ಪಕ್ಷದೊಳಗೆ ಚರ್ಚೆಗಳು ಹೆಚ್ಚಾಗಿವೆ. ಇಂತಹ ಫಲಿತಾಂಶವು ಕಳೆದ 15 ವರ್ಷಗಳಿಂದ ಆಡಳಿತ ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ರಾಜಕೀಯ ಸವಾಲಾಗಲಿದೆ ಎಂಬ ವಿಶ್ಲೇಷಣೆ ವ್ಯಕ್ತವಾಗಿದೆ.
ಈ ನಡುವೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮಗಳಿರುವ ಸಾಧ್ಯತೆ ಕುರಿತು ಆತಂಕ ವ್ಯಕ್ತಪಡಿಸಿ, ಪಕ್ಷದ ಕಾರ್ಯಕರ್ತರು ಹಾಗೂ ಎಣಿಕೆ ಏಜೆಂಟ್ ಗಳು ಕೇಂದ್ರಗಳಲ್ಲಿ ಹಾಜರಿದ್ದು ಕೊನೆಯವರೆಗೂ ಪ್ರಕ್ರಿಯೆಯನ್ನು ಗಮನಿಸುವಂತೆ ಸೂಚಿಸಿದರು. ಕೆಲ ಪ್ರದೇಶಗಳಲ್ಲಿ ಕೆಲವೇ ಸುತ್ತುಗಳ ನಂತರ ಎಣಿಕೆ ನಿಲ್ಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕಲ್ಯಾಣಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಇವಿಎಂ ಯಂತ್ರಗಳಲ್ಲಿ ವ್ಯತ್ಯಾಸಗಳ ಬಗ್ಗೆ ಸಿಎಂ ಮಮತಾ ಅವರು ಕಳವಳ ವ್ಯಕ್ತಪಡಿಸಿದ್ದರು, ಕೇಂದ್ರ ಪಡೆಗಳು ಪಕ್ಷಪಾತದಿಂದ ವರ್ತಿಸುತ್ತಿವೆ ಹಾಗೂ ರಾಜ್ಯದ ಕೆಲವು ಭಾಗಗಳಲ್ಲಿ ತೃಣಮೂಲ ಕಾರ್ಯಕರ್ತರ ಮೇಲೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.






