ಕ್ಷೇತ್ರ ಮರುವಿಂಗಡಣೆ ಮೂಲಕ ಗೆಲ್ಲುವ ಕ್ಷೇತ್ರಗಳನ್ನು ಹೆಚ್ಚಿಸಲು ಬಿಜೆಪಿಯಿಂದ ಪ್ರಯತ್ನ: ಮಲ್ಲಿಕಾರ್ಜುನ ಖರ್ಗೆ ಆರೋಪ

ಮಲ್ಲಿಕಾರ್ಜುನ ಖರ್ಗೆ | Photo Credit : PTI
ಹೊಸದಿಲ್ಲಿ, ಎ. 16: ದೋಷಪೂರಿತ ಕ್ಷೇತ್ರ ಮರುವಿಂಗಡಣೆ ಮಸೂದೆ ಮೂಲಕ ಬಿಜೆಪಿಯು ಮುಂದಿನ ಚುನಾವಣೆಯಲ್ಲಿ ತಾನು ಗೆಲ್ಲುವ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಆರೋಪಿಸಿದ್ದಾರೆ. ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿಡುವ ಸೋಗಿನಲ್ಲಿ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಪುನರ್ ರೂಪಿಸಲು ಈ ಮಸೂದೆಯು ಅವಕಾಶ ಮಾಡಿಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
‘‘ಮಹಿಳಾ ಮೀಸಲಾತಿಯ ಸೋಗಿನಲ್ಲಿರುವ ದೋಷಪೂರಿತ ಕ್ಷೇತ್ರ ಮರುವಿಂಗಡಣಾ ಮಸೂದೆಗಳು ಸಂಸತ್ತನ್ನು ಅಪಹರಿಸಲು ಪ್ರತಿಪಕ್ಷವು ಬಿಡುವುದಿಲ್ಲ. ಪ್ರಜಾಪ್ರಭುತ್ವದ ಮೇಲಿನ ಈ ದಾಳಿಯ ವಿರುದ್ಧ ನಾವು ಹೋರಾಡುತ್ತೇವೆ’’ ಎಂದು ಅವರು ಹೇಳಿದರು.
‘‘ಕ್ಷೇತ್ರಗಳನ್ನು ಪುನರ್ವಿಂಗಡಿಸಿ ಆಡಳಿತಾರೂಢ ಪಕ್ಷವು ಪ್ರಬಲವಾಗಿರುವ ಪ್ರದೇಶಗಳಲ್ಲಿ ಸ್ಥಾನಗಳನ್ನು ಹೆಚ್ಚಿಸುವ ಯೋಜನೆಯನ್ನು ಸರಕಾರ ಹೊಂದಿದೆ’’ ಎಂದು ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದರು.
‘‘ಹೀಗೆ ಮಾಡಲು ಅವರು ನೆಪವಾಗಿ ಮಹಿಳಾ ಮೀಸಲಾತಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ, ಅವರು ಈಗಾಗಲೇ 2023ರಲ್ಲಿ ತಂದಿರುವ ಸಾಂವಿಧಾನಿಕ ತಿದ್ದುಪಡಿಗಳಿಗೆ ಮತ್ತೆ ತಿದ್ದುಪಡಿಗಳನ್ನು ತರುತ್ತಿದ್ದಾರೆ’’ ಎಂದು ಅವರು ಬೆಟ್ಟು ಮಾಡಿದರು.




