ನಿತೀಶ್‍ಗೆ ಬಿಜೆಪಿಯ ಬಾಗಿಲು ಮುಚ್ಚಿದೆ: ಕೇಂದ್ರ ಸಚಿವರ ಹೇಳಿಕೆಗೆ ತದ್ವಿರುದ್ಧ ಹೇಳಿಕೆ ನೀಡಿದ ಸುಶೀಲ್ ಮೋದಿ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೆ ಎನ್ ಡಿಎ ತೆಕ್ಕೆಗೆ ಬರುವ ಬಗ್ಗೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ನೀಡಿರುವ ಹೇಳಿಕೆ ಅವರ ವೈಯಕ್ತಿಕ. ಆದರೆ ಬಿಹಾರ ಮುಖ್ಯಮಂತ್ರಿಗೆ ಬಿಜೆಪಿ ಬಾಗಿಲು ಮುಚ್ಚಿದೆ ಎಂದು ಬಿಜೆಪಿ ಸಂಸದ ಸುಶೀಲ್ ಮೋದಿ ಹೇಳಿದ್ದಾರೆ.
"ಒಂದು ವೇಳೆ ಅವರು ಬಿಜೆಪಿಗೆ ಬರಲು ಬಯಸಿದರೂ, ಬಿಜೆಪಿ ಅದಕ್ಕೆ ಸಿದ್ಧವಿಲ್ಲ. ರಾಮದಾಸ್ ಅಠಾವಳೆ ಬಿಜೆಪಿ ವಕ್ತಾರರೂ ಅಲ್ಲ; ಎನ್ ಡಿಎ ವಕ್ತಾರರೂ ಅಲ್ಲ. ಅವರು ಒಂದು ಪಕ್ಷದ ಮುಖಂಡ ಹಾಗೂ ಕೇಂದ್ರ ಸಚಿವ. ಆದ್ದರಿಂದ ಇದು ಅವರ ವೈಯಕ್ತಿಕ ಅಭಿಪ್ರಾಯ ಇರಬಹುದು. ಆದರೆ ಬಿಜೆಪಿ ತನ್ನ ಬಾಗಿಲನ್ನು ಮುಚ್ಚಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಎಎನ್‍ಐ ಜತೆಗೆ ಮಾತನಾಡಿದ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ, ನಿತೀಶ್ ಕುಮಾರ್ ಬರಲು ಬಯಸಿದರೂ, ನಾವು ಅವರನ್ನು ಸ್ವಾಗತಿಸುವುದಿಲ್ಲ ಎಂದರು. ನಿತೀಶ್ ಕುಮಾರ್ ಅವರನ್ನು ಹೊರೆ ಎಂದು ಬಣ್ಣಿಸಿದ ಅವರು, ಮತಗಳನ್ನು ವರ್ಗಾಯಿಸುವ ಬಿಹಾರ ಮುಖ್ಯಮಂತ್ರಿಗಳ ಸಾಮಥ್ರ್ಯ ಮುಗಿದ ಅಧ್ಯಾಯ ಎಂದು ಪ್ರತಿಪಾದಿಸಿದರು.
"ಅವರು ಹೊರೆಯಾಗಿ ಪರಿಣಮಿಸಿದ್ದಾರೆ. ಆರ್ ಜೆಡಿ ಧೀರ್ಘಕಾಲ ಹೊರೆಯನ್ನು ತಾಳಿಕೊಳ್ಳುವ ಬಗ್ಗೆ ನನಗೆ ಅನುಮಾನ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಂಡುಬಂದಂತೆ ಮೋದಿ ಬರದಿದ್ದರೆ, ನಿತೀಶ್‍ಗೆ 44 ಸ್ಥಾನಗಳೂ ಬರುತ್ತಿರಲಿಲ್ಲ. ರಾಜಕೀಯದಲ್ಲಿ ಮತಗಳ ಶಕ್ತಿ ಇದ್ದರೆ ನೀವು ಪ್ರಮುಖರಾಗುತ್ತೀರಿ. ಇಲ್ಲದಿದ್ದರೆ, ನಿಮಗೆ ಪ್ರಾಮುಖ್ಯವೇ ಇರುವುದಿಲ್ಲ ಎಂದು ಹೇಳಿದರು.







