‘ಬಿಕ್ಕಟ್ಟಿನ ನಡುವೆಯೂ ಬಿಜೆಪಿಯ ಲೂಟಿಯ ದಿನಗಳು’: ಖರ್ಗೆ ವಾಗ್ದಾಳಿ

ಮಲ್ಲಿಕಾರ್ಜುನ ಖರ್ಗೆ | Photo Credit : PTI
ಹೊಸದಿಲ್ಲಿ, ಎ. 1: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಉಲ್ಲೇಖಿಸಿ ಬುಧವಾರ ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಮೋದಿ ಸರಕಾರವು ದೇಶದ ರಕ್ಷಣಾ ಹಾಗೂ ಆರ್ಥಿಕ ನೀತಿಗಳನ್ನು ಸಂಪೂರ್ಣವಾಗಿ ‘‘ಧ್ವಂಸಗೊಳಿಸಿದೆ’’ ಎಂದು ಆರೋಪಿಸಿದೆ.
ಸಾಮಾನ್ಯ ಜನರು ಚೇತರಿಕೆಗೆ ಸರಕಾರದತ್ತ ನೋಡುತ್ತಿದ್ದರೆ, ಬಿಜೆಪಿ ನಾಯಕತ್ವವು ‘‘ಈ ಬಿಕ್ಕಟ್ಟಿನ ನಡುವೆಯೂ ಜನರನ್ನು ಲೂಟಿಗೈಯುವ ಮತ್ತು ದೇಶವನ್ನು ಕೊಳ್ಳೆಹೊಡೆಯುವತ್ತ ಗಮನ ಹರಿಸಿದೆ’’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
‘‘ಮೋದಿ ಸರಕಾರವು ದೇಶದ ರಕ್ಷಣಾ ಮತ್ತು ಆರ್ಥಿಕ ನೀತಿಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಇದರ ನೇರ ಪರಿಣಾಮವನ್ನು ದೇಶದ 140 ಕೋಟಿ ಜನರು ಅನುಭವಿಸುತ್ತಿದ್ದಾರೆ’’ ಎಂದು ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಎಪ್ರಿಲ್ 1ರಿಂದ ಹಲವಾರು ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಲಿವೆ ಎಂದು ಅವರು ಹೇಳಿದರು.
‘‘ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಗಳ ಬೆಲೆ ಗಗನಕ್ಕೇರಿದೆ. ಪೂರೈಕೆ ಪಾತಾಳಕ್ಕಿಳಿದಿದೆ. ಇದರ ಪರಿಣಾಮ ರಸ್ತೆ ಬದಿಯ ಚಹಾದಿಂದ ಹಿಡಿದು ಶಾಲೆಗಳ ಮಧ್ಯಾಹ್ನದ ಬಿಸಿಯೂಟದವರೆಗೆ ಕಾಣಿಸುತ್ತಿದೆ. ವಿಮಾನ ಇಂಧನ ದುಬಾರಿಯಾಗಿದೆ’’ ಎಂದು ಖರ್ಗೆ ತಿಳಿಸಿದ್ದಾರೆ.
ಒಮ್ಮೆ ಸಾಮಾನ್ಯ ಜನರಿಗೂ ಲಭ್ಯವಿದ್ದ ವಿಮಾನಯಾನ ಈಗ ಕನಸಾಗಿದೆ. ವಿಮಾನ ಟಿಕೆಟ್ ದರ ಮಿತಿಯನ್ನು ಕೂಡ ಸರಕಾರ ತೆಗೆದುಹಾಕಿದೆ ಎಂದು ಅವರು ಆರೋಪಿಸಿದರು.
‘‘ಬಿಜೆಪಿಯ ಲೂಟಿ ದಿವಸ’’ ಎಂಬ ಶೀರ್ಷಿಕೆಯ ವೀಡಿಯೊವನ್ನೂ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
►900ಕ್ಕೂ ಅಧಿಕ ಅಗತ್ಯ ಔಷಧಿಗಳ ಬೆಲೆ ಏರಿಕೆ
900ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆ ಏರಿಕೆಯಾಗಿದೆ. ವೈದ್ಯಕೀಯ ಚಿಕಿತ್ಸೆಯ ವೆಚ್ಚ ದಿನೇ ದಿನೇ ಗಗನಕ್ಕೇರುತ್ತಿದೆ. ಹೃದಯದ ಸ್ಟೆಂಟ್ ಗಳ ಬೆಲೆಯೂ ಹೆಚ್ಚಾಗಿದೆ.
ರಸ್ತೆ ಟೋಲ್ ಬೂತ್ಗಳಲ್ಲಿ ಜನರು ಹೆಚ್ಚು ಹಣ ಪಾವತಿಸಬೇಕಾಗಿದೆ. ‘‘ಹೆದ್ದಾರಿ ದರೋಡೆ’’ ಈಗ ವ್ಯಾಪಕವಾಗಿದೆ ಎಂದು ಖರ್ಗೆ ಹೇಳಿದ್ದಾರೆ.
ಸ್ಪೀಡ್ ಪೋಸ್ಟ್ ದರವನ್ನು 34 ಶೇಕಡ ಹೆಚ್ಚಿಸಲಾಗಿದೆ. ಪ್ಲಾಸ್ಟಿಕ್, ಉಕ್ಕು ಮತ್ತು ಸಿರಾಮಿಕ್ಸ್ ವಸ್ತುಗಳ ಬೆಲೆ ವರ್ಷಕ್ಕೊಮ್ಮೆ ಏರಿಕೆಯಾಗುತ್ತಿದೆ. ರೈತರು ಬಳಸುವ ಪಿವಿಸಿ ಪೈಪ್ ಗಳೂ ದುಬಾರಿಯಾಗಿವೆ.
ಡಾಂಬರಿನ ಬೆಲೆ ಸುಮಾರು 50 ಶೇಕಡ ಏರಿಕೆಯಾಗಿದೆ. ಕಟ್ಟಡ ನಿರ್ಮಾಣ ಕ್ಷೇತ್ರವು ಭಾರೀ ಒತ್ತಡವನ್ನು ಎದುರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.







