ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ: ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್
Photo : PTI
ಹೊಸದಿಲ್ಲಿ: ಇಲ್ಲಿಯ ಇಸ್ರೇಲ್ ರಾಯಭಾರ ಕಚೇರಿಯ ಸಮೀಪ ಮಂಗಳವಾರ ಸಂಭವಿಸಿದ್ದ ಕಡಿಮೆ ತೀವ್ರತೆಯ ಸ್ಫೋಟಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೋಲಿಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಘಟನೆಯಲ್ಲಿ ಯಾರೂ ಗಾಯಗೊಂಡಿರಲಿಲ್ಲ.
ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿನ ಇಸ್ರೇಲ್ ರಾಯಭಾರ ಕಚೇರಿಯ ಹಿಂಭಾಗದಲ್ಲಿ ಸ್ಫೋಟವು ಸಂಭವಿಸಿತ್ತು. ಸ್ಫೋಟದ ದೃಶ್ಯವು ಯಾವುದೇ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿರಲಿಲ್ಲ ಎನ್ನಲಾಗಿತ್ತು ಮತ್ತು ಸ್ಫೋಟ ಸಂಭವಿಸಿದ್ದ ಸ್ಥಳವು ಗಿಡಮರಗಳಿಂದ ಆವೃತವಾಗಿತ್ತು.
ಡಿ.೨೯ರಂದು ತುಘ್ಲಕ್ ರೋಡ್ ಪೋಲಿಸ್ ಠಾಣೆಯಲ್ಲಿ ಸ್ಫೋಟಕಗಳ ಕಾಯ್ದೆ ಮತ್ತು ಐಪಿಸಿ ಅಡಿ ಎಫ್ಐಆರ್ ದಾಖಲಾಗಿದೆ.
ಪ್ರದೇಶದಲ್ಲಿಯ ಸಿಸಿಟಿವಿ ವೀಡಿಯೊದ ಆಧಾರದಲ್ಲಿ ವ್ಯಕ್ತಿಯೋರ್ವನ ಬಗ್ಗೆ ಪೋಲಿಸರು ಆರಂಭದಲ್ಲಿ ಶಂಕಿಸಿದ್ದರು,ಆದರೆ ವೀಡಿಯೊ ದೃಶ್ಯಾವಳಿ ಅಸ್ಪಷ್ಟವಾಗಿದ್ದರಿಂದ ಆತನನ್ನು ಗುರುತಿಸಲು ಅವರಿಗೆ ಸಾಧ್ಯವಾಗಿರಲಿಲ್ಲ.
ಪೋಲಿಸರ ಪ್ರಕಾರ ಶಂಕಿತ ವ್ಯಕ್ತಿಗೆ ಸರಿಯಾಗಿ ಹಿಂದಿ ಮಾತನಾಡಲು ಬರುತ್ತಿರಲಿಲ್ಲ ಮತ್ತು ಆತ ಜಾಮಿಯಾ ನಗರ ಮೆಟ್ರೋ ನಿಲ್ದಾಣದಿಂದ ಆಟೋವೊಂದನ್ನು ಹತ್ತಿದ್ದ. ಇಬ್ಬರು ಆಟೋ ಚಾಲಕರ ಬಣ್ಣನೆಯ ಆಧಾರದಲ್ಲಿ ಪೋಲಿಸರು ಶಂಕಿತ ವ್ಯಕ್ತಿಯ ರೇಖಾಚಿತ್ರವನ್ನು ಸಿದ್ಧಗೊಳಿಸುತ್ತಿದ್ದಾರೆ.
ಮಂಗಳವಾರ ಸ್ಫೋಟದ ಸ್ಥಳದಲ್ಲಿ ಇಸ್ರೇಲ್ ರಾಯಭಾರಿ ನವೋರ್ ಗಿಲಾನಿ ಅವರನ್ನು ಉದ್ದೇಶಿಸಿ ಬರೆಯಲಾಗಿದ್ದ ಬೆದರಿಕೆ ಪತ್ರವನ್ನೂ ಪೋಲಿಸರು ಪತ್ತೆ ಹಚ್ಚಿದ್ದರು.