ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ ಟ್ರಂಪ್ ಪ್ರತಿಸುಂಕ : ಸೆನ್ಸೆಕ್ಸ್, ನಿಫ್ಟಿ ಭಾರೀ ಕುಸಿತ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳ ಮೇಲೆ ವಿಧಿಸಿದ ಪ್ರತಿಸುಂಕ ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣವನ್ನು ಸೃಷ್ಟಿಸಿದೆ.
ವಿಶ್ವಾದ್ಯಂತ ಹೂಡಿಕೆದಾರರು ಕೋಟ್ಯಂತರ ರೂ. ನಷ್ಟವನ್ನು ಅನುಭವಿಸಿದರು. ಭಾರತೀಯ ಷೇರು ಮಾರುಕಟ್ಟೆಯನ್ನು 10 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಸಿದೆ. ಸೋಮವಾರದ ವಹಿವಾಟು ಆರಂಭವಾಗುತ್ತಿದ್ದಂತೆಯೇ ಬೆಳಿಗ್ಗೆ 9.15ಕ್ಕೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸೆನ್ಸೆಕ್ಸ್ ಸೂಚ್ಯಂಕವು 3,072 ಎಂದರೆ ಶೇ.4.09ರಷ್ಟು ಕುಸಿತ ಕಂಡು 72,296ಕ್ಕೆ ಇಳಿಯಿತು. ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ 500 ಸೂಚ್ಯಂಕವು 1,146 ಎಂದರೆ ಶೇ.5ರಷ್ಟು ಕುಸಿತ ಕಂಡು 21,758ಕ್ಕೆ ಇಳಿಯಿತು.
ಡೊನಾಲ್ಡ್ ಟ್ರಂಪ್ ಪ್ರತಿಸುಂಕ ಘೋಷಣೆಗಳ ಬಳಿಕ ಅಮೆರಿಕ ಸೇರಿದಂತೆ ಜಗತ್ತಿನ ಎಲ್ಲ ಮಾರುಕಟ್ಟೆಗಳು ತೀವ್ರ ನಷ್ಟ ಅನುಭವಿಸಿದೆ. ಸೋಮವಾರದ ಪರಿಸ್ಥಿತಿ ಮತ್ತಷ್ಟು ಆತಂಕಕಾರಿಯಾಗಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಬಾಂಬೆ ಸ್ಟಾಕ್ ಎಕ್ಸ್ಚೇಂಜ್(ಬಿಎಸ್ಇ) ನಲ್ಲಿ ಪಟ್ಟಿ ಮಾಡಲಾದ ಎಲ್ಲಾ ಕಂಪೆನಿಗಳು ಈ ಕುಸಿತದ ಪ್ರಭಾವಕ್ಕೆ ಒಳಗಾಗಿದೆ. ಬೆಳಿಗ್ಗೆ 19 ಲಕ್ಷ ಕೋಟಿ ರೂ. ನಷ್ಟವಾಗಿದೆ.





