Jammu and Kashmir | ಹುತಾತ್ಮ ಪೊಲೀಸರಿಗೆ ಸಿಗದ ಕನಿಷ್ಠ ಗೌರವ: ಶವಪೆಟ್ಟಿಗೆಯೂ ಇಲ್ಲದೆ ಟ್ರಕ್ನಲ್ಲಿ ಮೃತದೇಹ ಸಾಗಾಟ

Photo: NDTV
ಶ್ರೀನಗರ: ಕಿಶ್ತ್ವಾರ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ (SPO) ಮೃತದೇಹಗಳನ್ನು ಕನಿಷ್ಠ ಗೌರವವೂ ಇಲ್ಲದೆ, ಡಂಪರ್ ಟ್ರಕ್ನಲ್ಲಿ ಅವರ ಸ್ವಗ್ರಾಮಕ್ಕೆ ತಂದಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹುತಾತ್ಮರಾದ ಬಾಬಿ ಚಂದ್ ಮತ್ತು ರಶ್ಪಾಲ್ ಕುಮಾರ್ ಅವರ ಮೃತದೇಹಗಳನ್ನು ಶುಕ್ರವಾರ ಕಿಯಾರ್ ಗ್ರಾಮಕ್ಕೆ ಡಂಪರ್ನಲ್ಲಿ ತರಲಾಗಿತ್ತು. ಮೃತದೇಹಗಳನ್ನು ಸಾಗಿಸಲು ಶವಪೆಟ್ಟಿಗೆ ಸೇರಿದಂತೆ ಅಗತ್ಯವಾದ ಕನಿಷ್ಠ ವ್ಯವಸ್ಥೆಗಳೂ ಇರಲಿಲ್ಲ ಎಂಬ ಆರೋಪ ಕೇಳಿಬಂದಿದೆ.
ಮೃತದೇಹಗಳನ್ನು ಸ್ವೀಕರಿಸಲು ಯಾವುದೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿರಲಿಲ್ಲ. ಅಷ್ಟೇ ಅಲ್ಲ, ಮೃತದೇಹಗಳನ್ನು ಎತ್ತಲು ಸ್ಟ್ರೆಚರ್ ಕೂಡ ಒದಗಿಸಿರಲಿಲ್ಲ. ಕೊನೆಗೆ ಗ್ರಾಮಸ್ಥರು ಸೇನೆಯಿಂದ ಸ್ಟ್ರೆಚರ್ ಪಡೆದುಕೊಂಡು ಮೃತದೇಹಗಳನ್ನು ಕೆಳಗಿಳಿಸಬೇಕಾಯಿತು. ಮೃತದೇಹಗಳನ್ನು ಮುಚ್ಚಲು ಬೇಕಾದ ಬಿಳಿ ಬಟ್ಟೆಯನ್ನು ಕೂಡಾ ಗ್ರಾಮಸ್ಥರೇ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ದೇಶದಕ್ಕಾಗಿ ಪ್ರಾಣತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಗಳ ಮೃತದೇಹಕ್ಕೆ ಅವಮಾನಕರ ರೀತಿಯಲ್ಲಿ ಅಂತಿಮ ಗೌರವ ಸಲ್ಲಿಸಿರುವುದು ಕುಟುಂಬಸ್ಥರ ನೋವಿಗೆ ಕಾರಣವಾಗಿದ್ದು, ಸಂಬಂಧಿಕರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಗೆ ಬಿಜೆಪಿ ನಾಯಕ ಹಾಗೂ ಜಮ್ಮು-ಕಾಶ್ಮೀರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ ಮತ್ತು ಕಿಶ್ತ್ವಾರ್ ಶಾಸಕಿ ಶಗುನ್ ಪರಿಹಾರ್ ಕೂಡಾ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ತಡವಾಗಿ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಿದ ಶಗುನ್ ಪರಿಹಾರ್, “ನಮ್ಮ SPOಗಳ ಮೃತದೇಹಗಳನ್ನು ಡಂಪರ್ನಲ್ಲಿ ತರಲಾಗಿದೆ. ನಮ್ಮ ದೇಶಕ್ಕಾಗಿ ಪ್ರಾಣ ನೀಡಿದ ವೀರರಿಗೆ ಈ ರೀತಿ ಅವಮಾನ ಮಾಡಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಚಾರವನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಗಮನಕ್ಕೆ ತಂದ ಬಳಿಕವಷ್ಟೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ಆರೋಪಿಸಲಾಗಿದೆ.






