‘ಚೌಕಿದಾರ್ ಚೋರ್’ ಹೇಳಿಕೆ: ರಾಹುಲ್ ವಿರುದ್ಧದ ಮಾನನಷ್ಟ ಪ್ರಕರಣ ರದ್ದುಪಡಿಸಲು ಬಾಂಬೆ ಹೈಕೋರ್ಟ್ ನಕಾರ

Photo | livelaw
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಚೋರೋ ಕೆ ಸರ್ದಾರ್’ ಮತ್ತು ‘ಕಮಾಂಡರ್-ಇನ್-ಥೀಫ್’ ಎಂದು ಕರೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ರದ್ದುಪಡಿಸಲು ಬಾಂಬೆ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.
ಪ್ರಕರಣದಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾರಿಗೊಳಿಸಿದ್ದ ಸಮನ್ಸ್ ಮತ್ತು ಮುಂದಿನ ವಿಚಾರಣೆಯನ್ನು ಪ್ರಶ್ನಿಸಿ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಬಿಜೆಪಿ ಕಾರ್ಯಕರ್ತ ಸಲ್ಲಿಸಿರುವ ದೂರು ವಿಚಾರಣೆಗೆ ಯೋಗ್ಯವಲ್ಲ ಎಂದು ರಾಹುಲ್ ಗಾಂಧಿ ಪರ ವಕೀಲರು ವಾದಿಸಿದ್ದರು.
ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್ ನಲ್ಲಿ ಬಿಜೆಪಿ ಅಥವಾ ಯಾವುದೇ ರಾಜಕೀಯ ಪಕ್ಷದ ಹೆಸರನ್ನು ಉಲ್ಲೇಖಿಸಿಲ್ಲ. ಯಾವುದೇ ‘ಗುರುತಿಸಬಹುದಾದ ಅಥವಾ ನಿರ್ದಿಷ್ಟ ವರ್ಗ’ವನ್ನು ಗುರಿಯಾಗಿಸಿಕೊಂಡಿಲ್ಲ. ಹೀಗಾಗಿ, ಹೇಳಿಕೆಯಿಂದ ನೇರವಾಗಿ ನೊಂದ ವ್ಯಕ್ತಿ ಅಥವಾ ನಿರ್ದಿಷ್ಟ ಗುಂಪು ಇಲ್ಲದಿರುವಾಗ ಕ್ರಿಮಿನಲ್ ಮಾನನಷ್ಟ ಪ್ರಕರಣವನ್ನು ಮುಂದುವರಿಸಲು ಅವಕಾಶವಿಲ್ಲ ಎಂದು ಗಾಂಧಿ ಪರ ಹಿರಿಯ ವಕೀಲ ಸುದೀಪ್ ಪಾಸ್ಬೋಲಾ ವಾದಿಸಿದರು.
ಪಕ್ಷದ ಕಾರ್ಯಕರ್ತರಿಗೆ ಅನ್ವಯವಾಗುತ್ತದೆ ಎಂಬ ಕಾರಣಕ್ಕೆ ಮಾತ್ರ ಹೇಳಿಕೆಯನ್ನು ಆಧರಿಸಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಎಂದೂ ಅವರು ಹೇಳಿದರು.
ಈ ವಾದದ ವಿಚಾರದಲ್ಲಿ ನ್ಯಾಯಾಲಯವು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಅವಲಂಬಿಸಿದೆ. ರಾಜಕೀಯ ಪಕ್ಷವೊಂದು ನೋಂದಾಯಿತವಾಗಿರುವ ಕಾರಣ ಅದು ಗುರುತಿಸಬಹುದಾದ ಮತ್ತು ನಿರ್ದಿಷ್ಟ ಸಂಸ್ಥೆಯಾಗಿದೆ ಎಂದು ದೆಹಲಿ ಹೈಕೋರ್ಟ್ ಆ ತೀರ್ಪಿನಲ್ಲಿ ಹೇಳಿತ್ತು.
ದೂರುದಾರರು, ರಾಹುಲ್ ಗಾಂಧಿ ಮತ್ತು ಮಹಾರಾಷ್ಟ್ರ ಸರಕಾರದ ಅರ್ಜಿಗಳ ವಿಚಾರಣೆ ನಡೆಸಿದ ಬಳಿಕ ಬಾಂಬೆ ಹೈಕೋರ್ಟ್ ಈ ವರ್ಷದ ಫೆಬ್ರವರಿಯಲ್ಲಿ ಪ್ರಕರಣದ ಆದೇಶವನ್ನು ಕಾಯ್ದಿರಿಸಿತ್ತು.
ಬಿಜೆಪಿ ಕಾರ್ಯಕರ್ತರಿಂದ ದೂರು
ಬಿಜೆಪಿ ಕಾರ್ಯಕರ್ತ ಮಹೇಶ್ ಶ್ರೀಶ್ರೀಮಲ್ ಅವರು ರಾಹುಲ್ ಗಾಂಧಿ ವಿರುದ್ಧ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಬಳಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಗಾಂಧಿಗೆ ಸಮನ್ಸ್ ಜಾರಿಗೊಳಿಸಿತ್ತು.
ರಾಹುಲ್ ಗಾಂಧಿ ಮಾಡಿರುವ ಹೇಳಿಕೆಗಳು ಪ್ರಧಾನಿ ಮೋದಿ, ಆಡಳಿತಾರೂಢ ಬಿಜೆಪಿ ಮತ್ತು ಅದರ ಸದಸ್ಯರನ್ನು ಗುರಿಯಾಗಿಸಿಕೊಂಡಿವೆ. ಇದರಿಂದ ಅವರ ಖ್ಯಾತಿಗೆ ಧಕ್ಕೆಯಾಗಿದೆ ಎಂದು ಶ್ರೀಶ್ರೀಮಲ್ ದೂರಿನಲ್ಲಿ ವಾದಿಸಿದ್ದರು.
ಮೋದಿಯನ್ನು ‘ಚೋರೋ ಕೆ ಸರ್ದಾರ್’ ಎಂದು ಕರೆದಿರುವುದು ಬಿಜೆಪಿ ಸದಸ್ಯರೆಲ್ಲರನ್ನೂ ‘ಕಳ್ಳರು’ ಎಂದು ಬಿಂಬಿಸಿದಂತಾಗಿದೆ. ಆದ್ದರಿಂದ ಬಿಜೆಪಿ ಕಾರ್ಯಕರ್ತನಾಗಿ ತಮಗೆ ಮಾನನಷ್ಟ ಮೊಕದ್ದಮೆ ಹೂಡುವ ಹಕ್ಕಿದೆ ಎಂದು ಅವರು ವಾದಿಸಿದ್ದರು.
ಈ ಸಮನ್ಸ್ ಮತ್ತು ಪ್ರಕರಣದ ಮುಂದಿನ ವಿಚಾರಣೆಯನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಪ್ರಕರಣವನ್ನು ರದ್ದುಪಡಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.






