ಫುಜೈರಾದಲ್ಲಿ ರಸ್ತೆ ಅಪಘಾತ | ಕೇರಳ ಮೂಲದ 21 ವರ್ಷದ ಅವಳಿ ಸಹೋದರ-ಸಹೋದರಿ, ಮೂರು ವರ್ಷದ ಬಾಲಕ ಮೃತ್ಯು
ಜೊತೆಗೆ ಹುಟ್ಟಿದ ಅವಳಿಗಳು ಮೃತ್ಯುವಿನಲ್ಲೂ ಒಂದಾದರು!

Photo: Gulf News
ಫುಜೈರಾ: ಹುಟ್ಟುಹಬ್ಬ, ಶಾಲೆ, ಕಾಲೇಜು ಹಾಗೂ ಬದುಕಿನ ಕನಸುಗಳನ್ನು ಹಂಚಿಕೊಂಡಿದ್ದ ಅವಳಿ ಸಹೋದರ-ಸಹೋದರಿ ಸಾವಿನಲ್ಲೂ ಒಂದಾಗಿದ್ದಾರೆ. ಬುಧವಾರ ರಾತ್ರಿ ಫುಜೈರಾದಲ್ಲಿ ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ 21 ವರ್ಷದ ಅಸ್ಮಿಲ್ ಸಿದ್ದಿಕ್ ಮತ್ತು ಅವರ ಅವಳಿ ಸಹೋದರಿ ಮಿಸ್ನಾ ಜುಬಿನ್ ಸಿದ್ದಿಕ್, ತಮ್ಮ ಮೂರು ವರ್ಷದ ಸೋದರಳಿಯ ಮೊಹಮ್ಮದ್ ಫೈಝ್ ಜೊತೆಗೇ ಅಂತ್ಯಸಂಸ್ಕಾರಗೊಳ್ಳಲಿದ್ದಾರೆ. ಮೂವರ ಅಂತ್ಯಸಂಸ್ಕಾರವನ್ನು ಯುಎಇಯಲ್ಲೇ ನೆರವೇರಿಸಲು ಕುಟುಂಬ ನಿರ್ಧರಿಸಿದೆ.
ಕೇರಳ ಮೂಲದ ಅಸ್ಮಿಲ್ ಮತ್ತು ಮಿಸ್ನಾ ಇಬ್ಬರಿಗೂ 21 ವರ್ಷ ವಯಸ್ಸಾಗಿತ್ತು. ಅಪಘಾತದಲ್ಲಿ ಅವರ ಮೂರು ವರ್ಷದ ಸೋದರಳಿಯ ಮೊಹಮ್ಮದ್ ಫೈಝ್ ಕೂಡ ಮೃತಪಟ್ಟಿದ್ದಾನೆ.
'ಅವರು ಒಟ್ಟಿಗೆ ಜನಿಸಿದರು. ಈಗ ತಾವು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಸೋದರಳಿಯನೊಂದಿಗೇ ಸಮಾಧಿಯಾಗಲಿದ್ದಾರೆ' ಎಂದು ಸಂಬಂಧಿಕರೊಬ್ಬರು ಗುರುವಾರ ರಾತ್ರಿ 'ಗಲ್ಫ್ ನ್ಯೂಸ್'ಗೆ ತಿಳಿಸಿದ್ದಾರೆ.
ಶುಕ್ರವಾರದ ಪ್ರಾರ್ಥನೆಯ ಬಳಿಕ ಫುಜೈರಾದ ಮಸೀದಿಯೊಂದರಲ್ಲಿ ಮೂವರ ಅಂತ್ಯಸಂಸ್ಕಾರ ನಡೆಯಲಿದೆ.
ಇತ್ತೀಚೆಗಷ್ಟೇ ತವರಿಗೆ ಭೇಟಿ ನೀಡಿ ಮರಳಿದ್ದರು
ಅಸ್ಮಿಲ್ ಮತ್ತು ಮಿಸ್ನಾ ಇತ್ತೀಚೆಗಷ್ಟೇ ಕೇರಳದಲ್ಲಿರುವ ತಮ್ಮ ತವರಿಗೆ ಭೇಟಿ ನೀಡಿ ಯುಎಇಗೆ ಮರಳಿದ್ದರು ಎಂದು ಅವರ ಹಿರಿಯ ಸಹೋದರ ಅಜ್ಮಲ್ ಸಿದ್ದಿಕ್ ತಿಳಿಸಿದ್ದಾರೆ.
ತಂದೆ ಸಿದ್ದಿಕ್, ತಾಯಿ ಆರಿಫಾ, ಮಗಳು ಫರ್ಝಾನಾ ಮತ್ತು ಆಕೆಯ ಮೂವರು ಮಕ್ಕಳೊಂದಿಗೆ ಕೆಲ ದಿನಗಳ ಹಿಂದಷ್ಟೇ ಯುಎಇಗೆ ಬಂದಿದ್ದರು. ಗೃಹಿಣಿಯಾಗಿರುವ ಫರ್ಝಾನಾ ಕೇರಳದಲ್ಲಿ ನೆಲೆಸಿದ್ದರೂ ಯುಎಇ ನಿವಾಸಿಯೂ ಆಗಿದ್ದಾರೆ. ಕೇರಳದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದು ಮರಳಿದ್ದ ತಂದೆಯೊಂದಿಗೆ ಅವರು ಯುಎಇಗೆ ಬಂದಿದ್ದರು.
ಅವಳಿ ಮಕ್ಕಳು ಕೇರಳದಲ್ಲಿ ಜನಿಸಿ, 10ನೇ ತರಗತಿಯವರೆಗೆ ಅಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ಫುಜೈರಾಗೆ ಬಂದು 11 ಮತ್ತು 12ನೇ ತರಗತಿಗಳನ್ನು ಪೂರ್ಣಗೊಳಿಸಿದ್ದರು. ನಂತರ ದೂರ ಶಿಕ್ಷಣದ ಮೂಲಕ ಆನ್ ಲೈನ್ ನಲ್ಲಿ 'ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್' (ಬಿಸಿಎ) ಪದವಿ ಓದುತ್ತಿದ್ದರು. ಇದರಿಂದ ಅಗತ್ಯವಿದ್ದಾಗ ಪ್ರಯಾಣಿಸಲು ಅವರಿಗೆ ಅನುಕೂಲವಾಗಿತ್ತು.
ತಮ್ಮ ಒಡಹುಟ್ಟಿದವರು ಮತ್ತು ಸೋದರಳಿಯನ ಸಾವಿನ ಬಗ್ಗೆ ಮಾತನಾಡುವಾಗ ಅಜ್ಮಲ್ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಪಘಾತವನ್ನು ಕಣ್ಣಾರೆ ಕಂಡ ತಾಯಿ
ಬುಧವಾರ ರಾತ್ರಿ ಸಂಬಂಧಿಕರೊಬ್ಬರನ್ನು ಶಾರ್ಜಾದಲ್ಲಿ ಬಿಟ್ಟು ಬರಲು ಕುಟುಂಬದವರು ಕಾರಿನಲ್ಲಿ ತೆರಳಿದ್ದರು. ರಾತ್ರಿ ಸುಮಾರು 11 ಗಂಟೆಗೆ ಫುಜೈರಾಗೆ ಮರಳುತ್ತಿದ್ದಾಗ ಫುಜೈರಾ ಕೋರ್ಟ್ ಹೌಸ್ ಸಮೀಪ ಅವರ ಕಾರು ಟ್ರಕ್ ಗೆ ಡಿಕ್ಕಿ ಹೊಡೆದಿದೆ ಎಂದು ಸಿದ್ದಿಕ್ ತಿಳಿಸಿದ್ದಾರೆ.
ಅಪಘಾತ ಸಂಭವಿಸಿದಾಗ ಅವಳಿ ಮಕ್ಕಳ ತಾಯಿ ಆರಿಫಾ ಕೂಡ ಕಾರಿನಲ್ಲಿದ್ದರು. ಅವರಿಗೂ ಗಾಯಗಳಾಗಿದ್ದವು. ಆದರೂ ಅವರು ತಮ್ಮ ಹಿರಿಯ ಮಗ ಅಜ್ಮಲ್ಗೆ ಕರೆ ಮಾಡಿ ಅಪಘಾತದ ವಿಷಯ ತಿಳಿಸಿದ್ದಾರೆ. ಬಳಿಕ ಅಜ್ಮಲ್ ಕುಟುಂಬದ ಇತರ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ ಎಂದು ಸಂಬಂಧಿಕರೊಬ್ಬರು ಹೇಳಿದ್ದಾರೆ.
ಅಪಘಾತದ ಬಳಿಕ ಅಸ್ಮಿಲ್, ಮಿಸ್ನಾ ಮತ್ತು ಪುಟ್ಟ ಫೈಝ್ ರಸ್ತೆಗೆ ಬಿದ್ದಿದ್ದರು. ಕುಟುಂಬದ ಇತರ ಸದಸ್ಯರು ಕಾರಿನೊಳಗೇ ಇದ್ದರು. ಸಂಬಂಧಿಕರು ಸ್ಥಳಕ್ಕೆ ತಲುಪುವಷ್ಟರಲ್ಲಿ ಎಲ್ಲರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಆರಿಫಾ, ಫರ್ಜಾನಾ ಮತ್ತು ಫರ್ಜಾನಾಳ ಇತರ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಆದರೂ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಗುರುವಾರವೂ ಅವರಿಗೆ ಚಿಕಿತ್ಸೆ ಮತ್ತು ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು.
ಈ ದುಃಖದ ನಡುವೆ ಕುಟುಂಬ ಮತ್ತೊಂದು ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ತನ್ನ ಮಗು ಮತ್ತು ಇಬ್ಬರು ಕಿರಿಯ ಒಡಹುಟ್ಟಿದವರು ಮೃತಪಟ್ಟಿರುವ ವಿಷಯವನ್ನು ಗುರುವಾರ ರಾತ್ರಿಯವರೆಗೂ ಫರ್ಝಾನಾ ಗೆ ತಿಳಿಸಿರಲಿಲ್ಲ. ಈ ದುಃಖದ ಸುದ್ದಿಯನ್ನು ಆಕೆಗೆ ಹೇಗೆ ತಿಳಿಸಬೇಕು ಎಂಬ ಚಿಂತೆಯಲ್ಲಿ ಸಂಬಂಧಿಕರಿದ್ದರು.
ಅವಳಿ ಮಕ್ಕಳ ನಡುವೆ ಆತ್ಮೀಯ ಬಾಂಧವ್ಯ
ಕೇರಳದಲ್ಲಿರುವ ಸಿದ್ದಿಕ್ ಅವರ ಸಹೋದರನ ಪತ್ನಿ ಮುಮ್ತಾಝ್, ಈ ದುರಂತದಿಂದ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ ಎಂದು 'OnManorama' ಗೆ ತಿಳಿಸಿದ್ದಾರೆ.
ಅಸ್ಮಿಲ್ ಮತ್ತು ಮಿಸ್ನಾ ಪರಸ್ಪರ ಬಹಳ ಆತ್ಮೀಯರಾಗಿದ್ದರು. ಯಾವಾಗಲೂ ಒಟ್ಟಿಗೆ ಇರುತ್ತಿದ್ದರು. ಇಬ್ಬರ ಆಸಕ್ತಿ ಮತ್ತು ಮನೋಭಾವವೂ ಒಂದೇ ರೀತಿಯದ್ದಾಗಿತ್ತು. ಪೋಷಕರೊಂದಿಗೆ ಬಹಳ ಆತ್ಮೀಯ ಸಂಬಂಧ ಹೊಂದಿದ್ದರು. ವಿದ್ಯಾಭ್ಯಾಸದ ನಡುವೆಯೂ ತಂದೆಯ ವ್ಯವಹಾರದಲ್ಲಿ ಸಹಾಯ ಮಾಡುತ್ತಿದ್ದರು ಎಂದು ಮುಮ್ತಾಝ್ ಹೇಳಿದ್ದಾರೆ.
'ಅವಳಿ ಮಕ್ಕಳಿಬ್ಬರೂ ಒಟ್ಟಿಗೆ ಪ್ರಾಣ ಕಳೆದುಕೊಂಡಿರುವುದು ತೀವ್ರ ನೋವುಂಟುಮಾಡುವ ಸಂಗತಿ. ಈ ದುರಂತವನ್ನು ನಮಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ' ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ.
ಫುಜೈರಾದಲ್ಲಿ ಚಿರಪರಿಚಿತ ಕುಟುಂಬ
ಅಸ್ಮಿಲ್ ಮತ್ತು ಮಿಸ್ನಾ ನಾಲ್ವರು ಒಡಹುಟ್ಟಿದವರಲ್ಲಿ ಕಿರಿಯರಾಗಿದ್ದರು. ನಾಲ್ವರೂ ಕೇರಳದಲ್ಲಿ ಜನಿಸಿ ಬೆಳೆದವರು. ಕೆಲವು ವರ್ಷಗಳ ಹಿಂದೆ ಕುಟುಂಬ ಯುಎಇಗೆ ಬಂದಿತ್ತು. ಸುಮಾರು ಎರಡು ವರ್ಷಗಳ ಹಿಂದೆ ಹಿರಿಯ ಸಹೋದರ ಅಜ್ಮಲ್ ಕೂಡ ಕುಟುಂಬದೊಂದಿಗೆ ಯುಎಇಗೆ ಸೇರಿಕೊಂಡಿದ್ದರು.
ತಂದೆ ಸಿದ್ದಿಕ್ ಹಲವು ದಶಕಗಳಿಂದ ಯುಎಇಯಲ್ಲಿ ನೆಲೆಸಿದ್ದಾರೆ. ಫುಜೈರಾದಲ್ಲಿ ಅವರು ಚಿರಪರಿಚಿತ ವ್ಯಕ್ತಿಯಾಗಿದ್ದಾರೆ. ಅಲ್ಲಿ 'ಇವಾ ಕೆಫೆಟೇರಿಯಾ' ಎಂಬ ಕೆಫೆಟೇರಿಯಾ-ರೆಸ್ಟೋರೆಂಟ್ ನಡೆಸುತ್ತಿದ್ದಾರೆ.
ಅಸ್ಮಿಲ್ ಆಗಾಗ್ಗೆ ತಂದೆಯ ಕೆಫೆಟೇರಿಯಾಕ್ಕೆ ಭೇಟಿ ನೀಡುತ್ತಿದ್ದರು. ಹೀಗಾಗಿ ಅಲ್ಲಿನ ಗ್ರಾಹಕರಿಗೂ ಅವರು ಚಿರಪರಿಚಿತರಾಗಿದ್ದರು.
ಅವಳಿ ಮಕ್ಕಳಿಬ್ಬರೂ ಯುಎಇ ಮತ್ತು ಕೇರಳದಲ್ಲಿ ಅನೇಕ ಸ್ನೇಹಿತರನ್ನು ಹೊಂದಿದ್ದರು.
ಕೇರಳದ ಮಲಪ್ಪುರಂ ಜಿಲ್ಲೆಯ ಕುನ್ನುಂಪುರಂನಲ್ಲಿರುವ Aljazeera ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಸಾಮಾಜಿಕ ಮಾಧ್ಯಮದಲ್ಲಿ ಅಸ್ಮಿಲ್ ಗೆ ಗೌರವ ಸಲ್ಲಿಸಿದೆ.
ಅಸ್ಮಿಲ್ ತಮ್ಮ ಊರಿನಲ್ಲಿ ಕಲೆ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಅವರ ಅಕಾಲಿಕ ನಿಧನಕ್ಕೆ ಕ್ಲಬ್ ಸದಸ್ಯರು ಸಂತಾಪ ಸೂಚಿಸಿದ್ದಾರೆ. ಸದಾ ನಗುಮುಖದಿಂದ ಇರುತ್ತಿದ್ದ, ಪ್ರೀತಿಯಿಂದ ಮಾತನಾಡುತ್ತಿದ್ದ ಮತ್ತು ಸ್ನೇಹಿತರ ಕಷ್ಟ-ಸುಖಗಳಲ್ಲಿ ನೆರವಾಗುತ್ತಿದ್ದ ಆತ್ಮೀಯ ವ್ಯಕ್ತಿ ಎಂದು ಅವರು ಅಸ್ಮಿಲ್ ಅವರನ್ನು ಸ್ಮರಿಸಿದ್ದಾರೆ.
ಕುಟುಂಬಕ್ಕೆ ಸಮುದಾಯದ ನೆರವು
ಶುಕ್ರವಾರ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ. ಅಗತ್ಯ ದಾಖಲೆಗಳ ಕೆಲಸ ಸೇರಿದಂತೆ ಅಂತ್ಯಸಂಸ್ಕಾರದ ಪ್ರಕ್ರಿಯೆಗಳಲ್ಲಿ ಸಮುದಾಯದ ಸ್ವಯಂಸೇವಕರು ಮತ್ತು ಸಾಮಾಜಿಕ ಕಾರ್ಯಕರ್ತರು ಕುಟುಂಬಕ್ಕೆ ನೆರವಾಗುತ್ತಿದ್ದಾರೆ.
ಈ ದುಃಖದ ಸಂದರ್ಭದಲ್ಲಿ ಮಲಯಾಳಿ ಸಮುದಾಯದ ಹಲವು ಸದಸ್ಯರು ಕುಟುಂಬದ ಬೆಂಬಲಕ್ಕೆ ನಿಂತಿದ್ದಾರೆ.
ಫುಜೈರಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಪ್ರಜೆಗಳು ಸೇರಿದಂತೆ ಹಲವರು ಮೃತಪಟ್ಟ ಹಿನ್ನೆಲೆಯಲ್ಲಿ ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ ಗುರುವಾರ ಮಧ್ಯಾಹ್ನ ಮೃತರ ಕುಟುಂಬಗಳಿಗೆ ನೆರವು ನೀಡಿರುವುದಾಗಿ ತಿಳಿಸಿದೆ.
ಸಾಧ್ಯವಿರುವ ಎಲ್ಲ ನೆರವು ಮತ್ತು ಬೆಂಬಲ ಒದಗಿಸಲು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿ ರಾಯಭಾರ ಕಚೇರಿ ಹೇಳಿದೆ.
14 ಮಂದಿ ಮೃತಪಟ್ಪ ಸರಣಿ ಅಪಘಾತ
ಬುಧವಾರ ಮಧ್ಯರಾತ್ರಿಗೆ ಸ್ವಲ್ಪ ಮೊದಲು ಫುಜೈರಾದ ಶೇಖ್ ಖಲೀಫಾ ಬಿನ್ ಝಾಯೆದ್ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿತ್ತು. ಟ್ರಕ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಟ್ರಕ್ ಹಲವು ವಾಹನಗಳಿಗೆ ಢಿಕ್ಕಿ ಹೊಡೆದಿತ್ತು. ಇದರಿಂದ ಸ್ಥಳದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು.
ಈ ಅಪಘಾತದಲ್ಲಿ 14 ಮಂದಿ ಮೃತಪಟ್ಟಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ಯುಎಇಯ ಆಂತರಿಕ ಸಚಿವಾಲಯ ಗುರುವಾರ ಸಂಜೆ ಪ್ರಕಟಿಸಿತ್ತು.
ಒಟ್ಟು 23 ವಾಹನಗಳು ಈ ಸರಣಿ ಅಪಘಾತದಲ್ಲಿ ಸಿಲುಕಿದ್ದವು. ಅವುಗಳಲ್ಲಿ ಐದು ಟ್ರಕ್ ಗಳು ಮತ್ತು 18 ಇತರ ವಾಹನಗಳು ಸೇರಿದ್ದವು.
ಸೌಜನ್ಯ: Gulf News






