ರಾಜೀವ್ ಗಾಂಧಿ ಪ್ರಧಾನಿಯಾಗುವುದನ್ನು ವಿರೋಧಿಸಿದ್ದೆ: ಸೋನಿಯಾ ಗಾಂಧಿ
ಜೀವನಚರಿತ್ರೆ ಬಿಡುಗಡೆಯ ಬಳಿಕ ಟೀಕೆ, ತಮಾಷೆ ಎದುರಿಸಲು ಸಿದ್ಧ ಎಂದ ಕಾಂಗ್ರೆಸ್ ನಾಯಕಿ

ಸೋನಿಯಾ ಗಾಂಧಿ | Photo : X @INCIndia
ಹೊಸದಿಲ್ಲಿ: ಪತಿ ರಾಜೀವ್ ಗಾಂಧಿ ಪ್ರಧಾನಿಯಾಗುವುದನ್ನು ತಾನು ಸಂಪೂರ್ಣವಾಗಿ ವಿರೋಧಿಸಿದ್ದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಬಹಿರಂಗಪಡಿಸಿದ್ದಾರೆ.
ನ. 10ರಂದು ಬಿಡುಗಡೆಯಾಗಲಿರುವ ತಮ್ಮ ಜೀವನಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕೃತಿ ಬಿಡುಗಡೆಯ ಬಳಿಕ ತಮಾಷೆಗೊಳಗಾಗಲು ಸಿದ್ಧಳಾಗಿದ್ದೇನೆ ಎಂದು ಹೇಳಿದ್ದಾರೆ.
‘ಹಲವು ದಶಕಗಳಿಂದ ನನ್ನ ಕತೆಯನ್ನು ಬೇರೆಯವರು ಹೇಳುತ್ತಿದ್ದರು. ಇದೀಗ ನನ್ನ ಸರದಿ’ ಎಂದು ಸೋನಿಯಾ ಗಾಂಧಿ ಬರೆದುಕೊಂಡಿದ್ದಾರೆ.
1 ನಿಮಿಷ 28 ಸೆಕೆಂಡ್ ಗಳ ವೀಡಿಯೊ ಹಂಚಿಕೊಂಡಿರುವ ಅವರು, ಜೀವನಚರಿತ್ರೆಯ ಪುಟಗಳನ್ನು ಪರಿಶೀಲಿಸುತ್ತಾ, ‘ನಾನು ಎಲ್ಲವನ್ನೂ ಹೇಳಬೇಕೆ ಎಂಬುದು ತಿಳಿದಿಲ್ಲ’ ಎಂದಿದ್ದಾರೆ.
‘ನನ್ನ ಪತಿಯನ್ನು ಪ್ರಧಾನಿಯಾಗುವಂತೆ ಕೇಳಿಕೊಂಡಾಗ, ನಾನು ಅದನ್ನು ಸಂಪೂರ್ಣವಾಗಿ ವಿರೋಧಿಸಿದ್ದೆ’ ಎಂದು ಅವರು ಹೇಳಿದ್ದಾರೆ.
‘ನನ್ನ ಬಗ್ಗೆ ಸಾಕಷ್ಟು ಬರೆಯಲಾಗಿದೆ. ಆದರೆ, ಅವುಗಳಲ್ಲಿ ಹಲವು ಸಮರ್ಪಕವಾಗಿಲ್ಲ. ಕೆಲವು ಕಲ್ಪಿತವಾಗಿದ್ದರೆ, ಇನ್ನು ಕೆಲವು ಉತ್ಪ್ರೇಕ್ಷೆಯಿಂದ ಕೂಡಿವೆ. ಹೀಗಾಗಿ, ನನ್ನ ಕತೆಯನ್ನು ನಾನೇ ಹೇಳುವ ಮೂಲಕ ವಾಸ್ತವಾಂಶಗಳನ್ನು ಇದ್ದಂತೆಯೇ ಮುಂದಿಡಲು ಬಯಸುತ್ತೇನೆ’ ಎಂದು ತಿಳಿಸಿದ್ದಾರೆ.
‘ಜನರಿಗೆ ನನ್ನ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಕೆಲವರು ತಮ್ಮ ಅಭಿಪ್ರಾಯ ಬದಲಿಸಿಕೊಳ್ಳಬಹುದು. ಇನ್ನು ಕೆಲವರ ಅಭಿಪ್ರಾಯ ಮತ್ತಷ್ಟು ಕೆಟ್ಟದಾಗಬಹುದು. ಆದರೆ, ಅದು ಸಹಜ. ನೀವು ಕೃತಿ ರಚಿಸಿದಾಗ ಅಥವಾ ಸಾರ್ವಜನಿಕ ಬದುಕಿನಲ್ಲಿದ್ದಾಗ ಇಂತಹ ಪ್ರತಿಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ. ತಮಾಷೆಗೊಳಗಾಗುವ ಸಾಧ್ಯತೆಯೂ ಇರುತ್ತದೆ’ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ವೀಡಿಯೊದಲ್ಲಿ ರಾಜೀವ್ ಗಾಂಧಿ ಅವರನ್ನು ವಿವಾಹವಾದ ಸಂದರ್ಭದಿಂದ ಹಿಡಿದು ಅವರ ಹತ್ಯೆಯವರೆಗಿನ ಪ್ರಮುಖ ಕ್ಷಣಗಳ ದೃಶ್ಯಾವಳಿಗಳನ್ನು ಬಳಸಲಾಗಿದೆ. ಸೋನಿಯಾ ಗಾಂಧಿ ಅವರು AICC ಸಭೆಗಳಲ್ಲಿ ಭಾಗವಹಿಸುತ್ತಿರುವ ಚಿತ್ರಗಳು ಹಾಗೂ ರಾಜೀವ್ ಗಾಂಧಿ ಮತ್ತು ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರೊಂದಿಗಿನ ಭಾವಚಿತ್ರಗಳೂ ವೀಡಿಯೊದಲ್ಲಿವೆ.
There’s bound to be some tamasha when this book comes out. After all, others have spent decades telling my “story”, now it’s my turn. https://t.co/jDy5vBI8ey
— Sonia Gandhi (@SoniaGandhi) October 27, 2026






