ಕೇರಳ | ಶ್ವಾಸಕೋಶ ಕ್ಯಾನ್ಸರ್ ರೋಗಿಗಳಿಗೆ ಮೆದುಳಿನ ಕ್ಯಾನ್ಸರ್ ಔಷಧ ವಿತರಿಸಿದ ಆರ್ಸಿಸಿ!

Photo: Manorama
ತಿರುವನಂತಪುರಂ, ಅ. 9: ಇಲ್ಲಿನ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರದಲ್ಲಿ (ಆರ್ಸಿಸಿ) ಮೆದುಳಿನ ಕ್ಯಾನ್ಸರ್ ಚಿಕಿತ್ಸೆಗಾಗಿ ನೀಡುವ ಕಿಮೊಥೆರಪಿ ಮಾತ್ರೆಗಳು ತಪ್ಪಾಗಿ ಶ್ವಾಸಕೋಶ ಕ್ಯಾನ್ಸರ್ ರೋಗಿಗಳಿಗೆ ವಿತರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆಗೆ ಪ್ಯಾಕೇಜಿಂಗ್ನಲ್ಲಿ ಉಂಟಾದ ಗೊಂದಲವೇ ಕಾರಣವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್ ಮೂಲದ ಗ್ಲೋಬೆಲಾ ಫಾರ್ಮಾ ತಯಾರಿಸಿದ ಔಷಧಿಯ ಪ್ಯಾಕೇಜಿಂಗ್ ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಈ ಘಟನೆ ನಡೆದಿದೆ. ಒಟ್ಟು 2,130 ಬಾಟಲಿಗಳಲ್ಲಿ 2,125 ಬಾಟಲಿಗಳು ಈಗಾಗಲೇ ಆಸ್ಪತ್ರೆಗಳಿಗೆ ಹಾಗೂ ರೋಗಿಗಳಿಗೆ ತಲುಪಿದ ಬಳಿಕ ಈ ತಪ್ಪು ಪತ್ತೆಯಾಗಿದೆ. ಈ ಘಟನೆ ಕುರಿತು ರಾಜ್ಯ ಔಷಧ ನಿಯಂತ್ರಣಾಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಮೆದುಳಿನ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಟೆಮೊಜೊಲೊಮೈಡ್ 100 ಮಾತ್ರೆಗಳ ಬದಲಿಗೆ ಶ್ವಾಸಕೋಶ ಮತ್ತು ವೃಷಣ ಕ್ಯಾನ್ಸರ್ಗಳಿಗೆ ಬಳಸುವ ಎಟೊಪೊಸೈಡ್ 50 ಔಷಧ ಪೂರೈಕೆಯಾಗಿತ್ತು. ಪ್ಯಾಕೇಜ್ನ ಹೊರಭಾಗದಲ್ಲಿ “ಟೆಮೊಜೊಲೊಮೈಡ್ 100” ಎಂದು ಮುದ್ರಿಸಲ್ಪಟ್ಟಿದ್ದರೂ, ಒಳಗಿನ ಬಾಟಲಿಗಳಲ್ಲಿ “ಎಟೊಪೊಸೈಡ್ 50” ಎಂದು ಲೇಬಲ್ ಮಾಡಲಾಗಿತ್ತು. ಪ್ರತಿ ಬಾಟಲಿಯಲ್ಲಿ ಎಂಟು ಮಾತ್ರೆಗಳಿದ್ದು, ಟೆಮೊಜೊಲೊಮೈಡ್ ಸಾಮಾನ್ಯವಾಗಿ ಐದು ಮಾತ್ರೆಗಳ ಪ್ಯಾಕ್ ಇರುತ್ತದೆ ಎಂಬ ವ್ಯತ್ಯಾಸವನ್ನು ಗಮನಿಸಿದ ಸಿಬ್ಬಂದಿ ತಕ್ಷಣ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಆರ್ಸಿಸಿಯ ಆಂತರಿಕ ತನಿಖೆ ಹಾಗೂ ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಪ್ರಯೋಗಾಲಯ ಪರೀಕ್ಷೆಯ ಬಳಿಕ ಪ್ಯಾಕೇಜಿಂಗ್ ದೋಷ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಕಲಿ ಅಥವಾ ತಪ್ಪು ಔಷಧ ವಿತರಣೆ ಕುರಿತು ಕಾನೂನುಬದ್ಧ ಕ್ರಮ ಕೈಗೊಳ್ಳುವ ಉದ್ದೇಶದಿಂದ ಗ್ಲೋಬೆಲಾ ಫಾರ್ಮಾ ವಿರುದ್ಧ ಪ್ರಕರಣ ದಾಖಲಾಗಿದ್ದು,ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಉಳಿದ ಔಷಧ ದಾಸ್ತಾನು ವಶಪಡಿಸಿಕೊಳ್ಳಲಾಗಿದೆ ಮತ್ತು ತನಿಖಾ ವರದಿಯನ್ನು ಸಲ್ಲಿಸಲಾಗಿದೆ.
ಸೆಪ್ಟೆಂಬರ್ 3, 2024ರಿಂದ ಈ ಔಷಧಿಗಳನ್ನು ಒಳರೋಗಿಗಳು ಹಾಗೂ ಹೊರರೋಗಿಗಳಿಗೆ ವಿತರಿಸಲಾಗಿತ್ತು. ವೈದ್ಯಕೀಯ ತಜ್ಞರ ಪ್ರಕಾರ, ತಪ್ಪು ಔಷಧ ಸೇವಿಸಿದ ರೋಗಿಗಳಲ್ಲಿ ರಕ್ತಕಣಗಳ ಪ್ರಮಾಣ ಇಳಿಕೆಯಾಗುವಂತಹ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುವ ಸಂಭವವಿದೆ. ಆದರೆ ಅದೃಷ್ಟವಶಾತ್ ಇಂದಿನ ತನಕ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸಿಬ್ಬಂದಿ ವ್ಯತ್ಯಾಸವನ್ನು ಪತ್ತೆಹಚ್ಚಿದ ತಕ್ಷಣವೇ ತನಿಖೆ ಪ್ರಾರಂಭಿಸಲಾಯಿತು. ಗ್ಲೋಬೆಲಾ ಫಾರ್ಮಾವನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಕಂಪೆನಿಯ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವುದು ಎಂದು ಆರ್ಸಿಸಿ ನಿರ್ದೇಶಕ ಡಾ.ಆರ್.ರಜನೀಶ್ ಕುಮಾರ್ ಹೇಳಿದ್ದಾರೆ.







