BRICS ಶೃಂಗಸಭೆ 2026 : ಭಾರತಕ್ಕೆ ಬಂದಿಳಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ

Photo:x.com/ani_digital
ಹೊಸದಿಲ್ಲಿ : ಬ್ರಿಕ್ಸ್ ಶೃಂಗಸಭೆ 2026ರ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಶುಕ್ರವಾರ ಮುಂಜಾನೆ ಭಾರತಕ್ಕೆ ಆಗಮಿಸಿದ್ದಾರೆ. ರಷ್ಯಾ ಅಧ್ಯಕ್ಷರ ಅಧಿಕೃತ ವಿಮಾನವು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.
ತಮ್ಮ ಈ ಭೇಟಿಯ ವೇಳೆ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದು, ಹಲವು ದ್ವಿಪಕ್ಷೀಯ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಫೆಬ್ರವರಿ 2022ರಲ್ಲಿ ರಷ್ಯಾ-ಉಕ್ರೇನ್ ಸಂಘರ್ಷ ಆರಂಭವಾದ ಬಳಿಕ, ವಿದೇಶದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪುಟಿನ್ ಭಾಗವಹಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಉಭಯ ನಾಯಕರು ಭಾರತ ಮತ್ತು ರಷ್ಯಾ ನಡುವಿನ ಸಮಗ್ರ ಬಾಂಧವ್ಯದ ಕುರಿತು ಚರ್ಚಿಸುವ ನಿರೀಕ್ಷೆಯಿದ್ದು, ವ್ಯಾಪಾರ, ಇಂಧನ ಹಾಗೂ ರಕ್ಷಣಾ ಸಹಕಾರದ ವಿಚಾರಗಳು ಪ್ರಮುಖವಾಗಿ ಪ್ರಸ್ತಾಪವಾಗುವ ಸಾಧ್ಯತೆಯಿದೆ.
ಆಗಸ್ಟ್ 31ರಂದು ಬಿಷ್ಕೆಕ್ ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ವೇಳೆ ಪ್ರಧಾನಿ ಮೋದಿ ಮತ್ತು ಪುಟಿನ್ ಭೇಟಿಯಾಗಿದ್ದರು. ಆ ಸಭೆ ನಡೆದ ಕೆಲವೇ ದಿನಗಳಲ್ಲಿ ಈ ಭೇಟಿ ನಡೆಯುತ್ತಿದೆ.
ಅಂದಿನ ಸಭೆಯಲ್ಲಿ ಉಭಯ ನಾಯಕರು ರಾಜಕೀಯ ಸಂಬಂಧಗಳು, ವ್ಯಾಪಾರ, ರಕ್ಷಣೆ, ಇಂಧನ, ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಸಹಕಾರವನ್ನು ಪರಿಶೀಲಿಸಿದ್ದರು. ಜೊತೆಗೆ ಪಶ್ಚಿಮ ಏಷ್ಯಾ ಹಾಗೂ ಕಪ್ಪು ಸಮುದ್ರ ಪ್ರದೇಶದಲ್ಲಿನ ಸಂಘರ್ಷಗಳ ಬಗ್ಗೆಯೂ ಚರ್ಚಿಸಿದ್ದರು.
ಉಕ್ರೇನ್ ಯುದ್ಧ ಮತ್ತು ರಷ್ಯಾದ ವ್ಯಾಪಾರದ ಮೇಲೆ ಪಾಶ್ಚಿಮಾತ್ಯ ದೇಶಗಳು ಹೇರಿರುವ ನಿರ್ಬಂಧಗಳಿಂದ ಭೌಗೋಳಿಕ-ರಾಜಕೀಯ ಒತ್ತಡ ಹೆಚ್ಚುತ್ತಿದ್ದರೂ, ಭಾರತ ಮತ್ತು ರಷ್ಯಾ ತಮ್ಮ ಆರ್ಥಿಕ ಒಡನಾಟವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿರುವ ಸಂದರ್ಭದಲ್ಲೇ ಪುಟಿನ್ ಅವರ ದಿಲ್ಲಿ ಭೇಟಿ ನಡೆದಿದೆ.
ಭಾರತಕ್ಕೆ ಸುಖೋಯ್ ಸು-57 ಸ್ಟೆಲ್ತ್ ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ಕುರಿತು ರಷ್ಯಾ ಪರಿಶೀಲಿಸುತ್ತಿವೆ ಎಂದು ರಷ್ಯಾ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಈ ಹಿಂದೆ ತಿಳಿಸಿದ್ದರು.






