ತೆಲಂಗಾಣದಲ್ಲಿ ಬಿಆರ್ಎಸ್-ಬಿಜೆಪಿ ಮೈತ್ರಿ ಸಾಧ್ಯತೆ?
ಪತ್ರ ವೈರಲ್; ಸ್ಪಷ್ಟನೆ ನೀಡದ ಬಿಆರ್ಎಸ್

PC : Bharatiya Janata Party
ಹೈದರಾಬಾದ್: ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಭಾರತೀಯ ರಾಷ್ಡ್ರೀಯ ಸಮಿತಿ ಹಾಗೂ ಬಿಜೆಪಿ ನಡುವೆ ಮೈತ್ರಿ ಏರ್ಪಡುವ ಸಾಧ್ಯತೆ ಎಂಬ ಇದೆ ದಟ್ಡ ಊಹಾಪೋಹಗಳು ತೆಲಂಗಾಣ ರಾಜಕೀಯ ವಲಯದಲ್ಲಿ ಹರಡಿದ್ದು, ಇದರ ಬೆನ್ನಿಗೇ, ಇತ್ತೀಚೆಗೆ ನಡೆದ ಪಕ್ಷದ ಸಭೆಯ ಸಕಾರಾತ್ಮಕತೆ ಹಾಗೂ ನಕಾರಾತ್ಮಕತೆ ಕುರಿತು ಭಾರತೀಯ ರಾಷ್ಟ್ರೀಯ ಸಮಿತಿಯ ನಾಯಕಿ ಕೆ.ಕವಿತಾ ಅವರು ತಮ್ಮ ತಂದೆ ಕೆ.ಚಂದ್ರಶೇಖರ್ ರಾವ್ಗೆ ಬರೆದಿದ್ದಾರೆನ್ನಲಾದ ಪತ್ರವು ಸಂಚಲನ ಸೃಷ್ಟಿಸಿದೆ.
ಈ ಪತ್ರದ ನೈಜತೆ ಇನ್ನೂ ದೃಢಪಡದಿದ್ದರೂ, ಈ ಕುರಿತು ಕವಿತಾರ ಕಚೇರಿಯಾಗಲಿ ಅಥವಾ ಕೆ.ಚಂದ್ರಶೇಖರ್ ಅವರಿಂದಾಗಲಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಕವಿತಾ ಅವರು ತಮ್ಮ ತಂದೆ ಕೆ.ಚಂದ್ರಶೇಖರ್ ರಾವ್ ಅವರಿಗೆ ತೆಲುಗು ಮತ್ತು ಇಂಗ್ಲಿಷ್ ಭಾಷೆಯಲ್ಲಿ ತಮ್ಮ ಸ್ವಂತ ಹಸ್ತಾಕ್ಷರದಲ್ಲಿ ಬರೆದಿದ್ದಾರೆಂದು ಹೇಳಲಾಗಿರುವ ಪತ್ರದಲ್ಲಿ, "ನೀವು ಕೇವಲ ಎರಡೇ ನಿಮಿಷ ಮಾತನಾಡಿದರೂ, ಭವಿಷ್ಯದಲ್ಲಿ ಬಿಆರ್ಎಸ್ ಹಾಗೂ ಬಿಜೆಪಿಯೊಂದಿಗೆ ಮೈತ್ರಿ ಏರ್ಪಡಲಿದೆ ಎಂದು ಜನರು ಊಹಾಪೋಹದಲ್ಲಿ ತೊಡಗಿದ್ದಾರೆ. ನೀವು ಬಿಜೆಪಿಯ ವಿರುದ್ಧ ಪ್ರಬಲವಾಗಿ ಮಾತನಾಡಬೇಕಿತ್ತು ಎಂದು ನನಗೂ ವೈಯಕ್ತಿಕವಾಗಿ ಅನಿಸಿತು. ಬಹುಶಃ ನಾನು ಬಿಜೆಪಿಯಿಂದ ತೊಂದರೆಗೀಡಾಗಿದ್ದರಿಂದ, ಹೀಗನ್ನಿಸಿರಬಹುದು. ಆದರೆ, ನೀವು ಬಿಜೆಪಿಯನ್ನು ಮತ್ತಷ್ಟು ಗುರಿಯಾಗಿಸಿಕೊಳ್ಳಬೇಕಿತ್ತು ಅಪ್ಪ.." ಎಂದು ಬರೆಯಲಾಗಿದೆ.
ಈ ಪತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಗಂಟೆಗಳೇ ಕಳೆದಿದ್ದರೂ, ವಿರೋಧ ಪಕ್ಷವಾದ ಭಾರತೀಯ ರಾಷ್ಟ್ರೀಯ ಸಮಿತಿ ಈವರೆಗೆ ಈ ಪತ್ರವನ್ನು ನಿರಾಕರಿಸಿಲ್ಲ.
ಈ ನಡುವೆ, ಕಳೆದ ಎಪ್ರಿಲ್ 27ರಂದು ಭಾರತೀಯ ರಾಷ್ಟ್ರೀಯ ಸಮಿತಿಯು ವಾರಂಗಲ್ನಲ್ಲಿ ತನ್ನ ಬೆಳ್ಳಿ ಹಬ್ಬ ಆಚರಿಸಿಕೊಂಡಿತ್ತು.







