ಅಖಿಲೇಶ್ ಯಾದವ್ ರ್ಯಾಲಿಯಲ್ಲಿ ಬುಲ್ಡೋಝರ್ ಢಿಕ್ಕಿ: ಬಿಜೆಪಿ ನಾಯಕನ ಪುತ್ರ ಮೃತ್ಯು

ಅಖಿಲೇಶ್ ಯಾದವ್| Photo Credit : PTI
ಲಕ್ನೋ: ಉತ್ತರಪ್ರದೇಶದ ಗೋರಖ್ಪುರದಲ್ಲಿ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಅವರ ನೇತೃತ್ವದಲ್ಲಿ ನಡೆದ ಪಕ್ಷದ ರೋಡ್ ಶೋ ಸಂದರ್ಭ ಬುಲ್ಡೋಝರ್ ಢಿಕ್ಕಿ ಹೊಡೆದು 12 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಈ ಘಟನೆ ರಾಜಕೀಯ ಕಾರ್ಯಕ್ರಮಗಳ ಸಂದರ್ಭ ವ್ಯವಸ್ಥೆಗಳು ಮತ್ತು ಜನಸಂದಣಿ ನಿರ್ವಹಣೆ ಕುರಿತು ಪ್ರಶ್ನೆಗಳನ್ನು ಎತ್ತಿವೆ.
ಮೃತಪಟ್ಟ ಬಾಲಕನನ್ನು ಚೌರಿ ಚೌರಾದ ರಾಜಧಾನಿ ಗ್ರಾಮದ ನಿವಾಸಿ ಆರ್ಯವರ್ಧನ್ ಸಿಂಗ್ ಎಂದು ಗುರುತಿಸಲಾಗಿದೆ. ಈತನ ತಂದೆ ಸ್ಥಳೀಯ ಬಿಜೆಪಿ ನಾಯಕರಾಗಿದ್ದಾರೆ. ಸಮಾಜವಾದಿ ಪಕ್ಷದ ಪಿಡಿಎ ರಥಯಾತ್ರೆಯ ಸಂದರ್ಭ ಕೂಡಾಘಾಟ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ.
ಘಟನೆ ನಡೆದ ಸಂದರ್ಭ ಬುಲ್ಡೋಝರ್ ರ್ಯಾಲಿಯ ಮೇಲೆ ಹೂವಿನ ಎಸಳುಗಳನ್ನು ಎರಚುತ್ತಿತ್ತು ಎಂದು ಮೃತ ಬಾಲಕನ ತಂದೆ ಓಂಕಾರ್ ಸಿಂಗ್ ತಿಳಿಸಿದ್ದಾರೆ. ಅಖಿಲೇಶ್ ಯಾದವ್ ಅವರ ಬೆಂಗಾವಲು ಪಡೆ ಮುಂದೆ ಸಾಗಿತ್ತು. ಈ ವೇಳೆ ಬಂದ ಬುಲ್ಡೋಝರ್ ತನ್ನ ಮಗನಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಢಿಕ್ಕಿಯ ರಭಸಕ್ಕೆ ಆರ್ಯವರ್ಧನ್ ರಸ್ತೆ ವಿಭಜಕಕ್ಕೆ ಅಪ್ಪಳಿಸಿದ್ದು, ಆತನ ತಲೆಯ ಹಿಂಭಾಗಕ್ಕೆ ತೀವ್ರ ಗಾಯಗಳಾಗಿದ್ದವು. ಅನಂತರ ಆತ ಮೃತಪಟ್ಟಿದ್ದಾನೆ ಎಂದು ಅವರು ಹೇಳಿದ್ದಾರೆ.
ಈ ಘಟನೆಯು ರೋಡ್ಶೋ ವೇಳೆ ಸಾರ್ವಜನಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮಾಡಿದ ವ್ಯವಸ್ಥೆಗಳ ಬಗ್ಗೆ, ವಿಶೇಷವಾಗಿ ಜನಸಂದಣಿಯ ನಡುವೆ ಭಾರೀ ವಾಹನಗಳ ಸಂಚಾರದ ಕುರಿತು ಪ್ರಶ್ನೆಗಳನ್ನು ಎತ್ತಿದೆ. ರ್ಯಾಲಿಯಲ್ಲಿ ಪಾಲ್ಗೊಳ್ಳುವ ವಾಹನಗಳ ಸಂಚಾರ ನಿಯಂತ್ರಿಸುವ ಹೊಣೆ ಯಾರದ್ದು ಎಂಬ ಪ್ರಶ್ನೆಯೂ ಕೇಳಿ ಬಂದಿದೆ.
ಘಟನೆಯ ನಂತರ, ಗೋರಖ್ಪುರ ಶಾಸಕ ಸರ್ವನ್ ನಿಷಾದ್ ಬಾಲಕನ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಸಂಪುಟ ಸಚಿವ ಡಾ. ಸಂಜಯ್ ನಿಷಾದ್ ಕೂಡ ಶಾಸಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಅಲ್ಲದೆ, ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ನೀಡುವಂತೆ ಭರವಸೆ ನೀಡಿದ್ದಾರೆ.
ಬಾಲಕನ ಸಾವಿಗೆ ಎಸ್ಪಿ ಕಾರ್ಯಕರ್ತರ ಗೂಂಡಾಗಿರಿಯೇ ಕಾರಣ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ಬುಲ್ಡೋಜರ್ ಅನ್ನು ವಶಪಡಿಸಿಕೊಂಡಿದ್ದು, ಅದರ ಮಾಲಿಕರನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದರೆ.
ಈ ಘಟನೆ ಬಗ್ಗೆ ಪ್ರಶ್ನಿಸಿದಾಗ ಅಖಿಲೇಶ್ ಯಾದವ್, ನನಗೆ ಈ ಘಟನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಲ್ಲದೆ, ರೋಡ್ಶೋಗೆ ಆಡಳಿತ ಮಂಡಳಿ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಜನರು ಬಿಜೆಪಿ ಸದಸ್ಯರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ. ಅವರು ಯಾರನ್ನಾದರೂ ಸುಳ್ಳು ಪ್ರಕರಣದಲ್ಲಿ ಸಿಲುಕಿಸುತ್ತಾರೆ ಎಂದು ಹೇಳಿದ್ದಾರೆ.






