ಉತ್ತರ ಪ್ರದೇಶ| ಮಧ್ಯಪ್ರಾಚ್ಯ ಬಿಕ್ಕಟ್ಟು ಹಿನ್ನೆಲೆ ಈದ್ ಆಚರಿಸದಂತೆ ಕರೆ ನೀಡಿದ ಆರೋಪ : ಸಮಾಜವಾದಿ ಪಕ್ಷದ ನಾಯಕನ ವಿರುದ್ಧ ಪ್ರಕರಣ ದಾಖಲು

ಲಕ್ನೊ: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸುತ್ತಿರುವ ದಾಳಿಯ ಪ್ರತಿಭಟನಾರ್ಥವಾಗಿ ಈ ಬಾರಿ ಈದ್ ಆಚರಿಸದಂತೆ ಮುಸ್ಲಿಮರಿಗೆ ಕರೆ ನೀಡಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ ನಾಯಕನೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸದ್ಯ ಜೈಲಿನಲ್ಲಿರುವ ಅಝಂ ಖಾನ್ ಈ ಮನವಿ ಮಾಡಿದ್ದಾರೆ ಎಂದು ಆತ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮರಾದಾಬಾದ್‌ನ ಸಮಾಜವಾದಿ ಪಕ್ಷದ ನಾಯಕ ಯೂಸುಫ್ ಮಲಿಕ್ ಮಾರ್ಚ್ 14ರಂದು ಅಝಂ ಖಾನ್‌ರನ್ನು ರಾಮ್ಪುರ್ ಜೈಲಿನಲ್ಲಿ ಭೇಟಿ ಮಾಡಿದ್ದ ಎಂದು ಎಎಸ್‌ಪಿ ಅನುರಾಗ್ ಸಿಂಗ್ ತಿಳಿಸಿದ್ದಾರೆ. ಈ ಸಭೆಯಲ್ಲಿ ಅಝಂ ಖಾನ್‌ರ ಪತ್ನಿ ತಝೀನಾ ಫಾತಿಮಾ ಕೂಡಾ ಉಪಸ್ಥಿತರಿದ್ದರು ಎಂದು ಹೇಳಿದ್ದಾರೆ.
ಬಳಿಕ, ಜೈಲಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಯೂಸುಫ್ ಮಲಿಕ್, ಇತ್ತೀಚೆಗೆ ಇರಾನ್ ನ ಶಾಲೆಯ ಮೇಲೆ ಅಮೆರಿಕದಿಂದ ನಡೆದ ಕ್ಷಿಪಣಿ ದಾಳಿಯಲ್ಲಿ 160ಕ್ಕೂ ಹೆಚ್ಚು ಬಾಲಕಿಯರು ಮೃತಪಟ್ಟಿರುವುದಕ್ಕೆ ಸಂತಾಪ ವ್ಯಕ್ತಪಡಿಸಲು ಹಾಗೂ ಪ್ರತಿಭಟನಾರ್ಥವಾಗಿ ಈ ಬಾರಿ ಕಪ್ಪು ಬಟ್ಟೆಯನ್ನು ಧರಿಸಬೇಕು ಹಾಗೂ ಈ ವರ್ಷ ಈದ್ ಆಚರಿಸಬಾರದು ಎಂದು ಮುಸ್ಲಿಮರಿಗೆ ಅಝಂ ಖಾನ್ ಕರೆ ನೀಡಿದ್ದಾರೆ ಎಂದು ಹೇಳಿದ್ದರು.
ಈ ಸಂಬಂಧ ಯೂಸುಫ್ ಮಲಿಕ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆಯಲ್ಲಿ ಪತ್ತೆಯಾಗುವ ಸಂಗತಿಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್‌ಪಿ ಅನುರಾಗ್ ಸಿಂಗ್ ತಿಳಿಸಿದ್ದಾರೆ.






