ಮಧ್ಯಪ್ರದೇಶ | ಮಳಿಗೆಯ ಟ್ರಯಲ್ ರೂಮ್ನಲ್ಲಿ ಕ್ಯಾಮೆರಾ ಪತ್ತೆ; ಮಾಲಕನ ಬಂಧನ

Pc | iStock Photo
ಶಹದೋಲ್: ಮಧ್ಯಪ್ರದೇಶದ ಮಳಿಗೆಯೊಂದರ ಟ್ರಯಲ್ ರೂಮ್ನಲ್ಲಿ ಕ್ಯಾಮೆರಾ ಅಳವಡಿಸಿರುವುದು ಪತ್ತೆಯಾಗಿದೆ. ಇದರ ಬೆನ್ನಲ್ಲೇ ಬಟ್ಟೆ ಅಂಗಡಿ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಕೆಲವು ಸ್ಥಳೀಯ ಮಹಿಳೆಯರ ವೀಡಿಯೊಗಳು ವೈರಲ್ ಆಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಬಟ್ಟೆ ಮಳಿಗೆಯಲ್ಲಿನ ಗೌಪ್ಯ ಕ್ಯಾಮೆರಾದಲ್ಲಿ ದಾಖಲಾಗಿದ್ದ ಕೆಲ ವೀಡಿಯೊಗಳನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದ ಆರೋಪದ ಮೇಲೆ ಮಳಿಗೆಯ ಮಾಲಕನ ಅಪ್ರಾಪ್ತ ಮಗನನ್ನು ಕೂಡ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವೋಲೊಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಬುಧ್ವಾ ಪಟ್ಟಣದ ನಾರಾಯಣ ಗುಪ್ತಾ ಒಡೆತನದ ಮಳಿಗೆಯಲ್ಲಿ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಗುಪ್ತ ಕ್ಯಾಮೆರಾ ಇದೆ ಎಂದು ಕೃಷ್ಣಪಾಲ್ ಸಿಂಗ್ ಬೈಸ್ ಶನಿವಾರ ಬೆಳಿಗ್ಗೆ ದೂರು ನೀಡಿದ್ದರು.
ʼಪೊಲೀಸರು ಅಂಗಡಿಯ ಮೇಲೆ ದಾಳಿ ನಡೆಸಿದಾಗ ಕ್ಯಾಮೆರಾ ಪತ್ತೆಯಾಗಿದೆ. ಸ್ವತಃ ಅಂಗಡಿ ಮಾಲಿಕನೆ ಕ್ಯಾಮೆರಾವನ್ನು ಅಳವಡಿಸಿ, ವೀಡಿಯೊಗಳನ್ನು ತನ್ನ ಕಂಪ್ಯೂಟರ್ನಲ್ಲಿ ವೀಕ್ಷಿಸುತ್ತಿದ್ದʼ ಎಂದು ಇನ್ಸ್ಪೆಕ್ಟರ್ ಸುಭಾಷ್ ದುಬೆ ಪಿಟಿಐಗೆ ತಿಳಿಸಿದ್ದಾರೆ.
ಗುಪ್ತಾ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 54C , 509 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ FIR ದಾಖಲಿಸಿ, ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮ್ಜಿ ಶ್ರೀವಾಸ್ತವ ತಿಳಿಸಿದ್ದಾರೆ.







