Madhya Pradesh | ಹಸುವಿನ ಸಗಣಿ ಬಳಸಿ ಕ್ಯಾನ್ಸರ್ಗೆ ಚಿಕಿತ್ಸೆ ಕುರಿತ ಸಂಶೋಧನೆ: 3.5 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಅವ್ಯವಹಾರ; ವರದಿ

Photo| NDTV
ಭೋಪಾಲ್: ಹಸುವಿನ ಸಗಣಿ, ಹಸುವಿನ ಮೂತ್ರ ಮತ್ತು ಹಾಲಿನ ಮಿಶ್ರಣವಾದ ಪಂಚಗವ್ಯವನ್ನು ಬಳಸಿಕೊಂಡು ಕ್ಯಾನ್ಸರ್ನಂತಹ ಗಂಭೀರ ರೋಗಗಳಿಗೆ ಚಿಕಿತ್ಸೆ ಕುರಿತ ಭರವಸೆ ನೀಡಿದ್ದ ಸರಕಾರಿ ಅನುಮೋದಿತ ಸಂಶೋಧನಾ ಯೋಜನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ವಿವಾದಕ್ಕೆ ಸಿಲುಕಿದೆ. “ಸಂಶೋಧನೆ” ಹೆಸರಿನಲ್ಲಿ ಹಣಕಾಸು ಅಕ್ರಮ ಮತ್ತು ಸಂಶಯಾಸ್ಪದ ಖರ್ಚು ವೆಚ್ಚಗಳನ್ನು ಮಾಡಿರುವುದು ಬಹಿರಂಗಗೊಂಡಿದೆ ಎಂದು ತನಿಖಾ ವರದಿಯನ್ನು ಉಲ್ಲೇಖಿಸಿ NDTV ವರದಿ ಮಾಡಿದೆ.
ನಾನಾಜಿ ದೇಶಮುಖ್ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಈ ಸಂಶೋಧನೆಗೆ 2011ರಲ್ಲಿ ಸುಮಾರು 8 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಸರಕಾರ 3.5 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಈ ಕುರಿತು ದೂರು ಬಂದ ಹಿನ್ನೆಲೆ ಜಿಲ್ಲಾಡಳಿತ ತನಿಖೆಗೆ ಆದೇಶಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವ್ಯವಹಾರ ಕುರಿತ ಆರೋಪಗಳ ಗಂಭೀರತೆಯನ್ನು ಪರಿಗಣಿಸಿ ವಿಭಾಗೀಯ ಆಯುಕ್ತರು ಈ ವಿಷಯವನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶಿಸಿದರು. ಜಿಲ್ಲಾಧಿಕಾರಿ ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದರು. ಇದೀಗ ತನಿಖಾ ಸಮಿತಿಯು ವರದಿಯನ್ನು ಸಲ್ಲಿಸಿದೆ. ತನಿಖೆಯ ವೇಳೆ ಆಘಾತಕಾರಿ ಅಂಶಗಳು ಕಂಡು ಬಂದಿದೆ ಮತ್ತು ಅಕ್ರಮಗಳು ನಡೆದಿರುವುದು ಬಹಿರಂಗಗೊಂಡಿದೆ ಎಂದು ವರದಿಯಾಗಿದೆ.
ತನಿಖಾ ವರದಿಯ ಪ್ರಕಾರ, 2011 ಮತ್ತು 2018ರ ಮಧ್ಯೆ ಯೋಜನೆಯ ಖರ್ಚು ವೆಚ್ಚದಲ್ಲಿ ಹಲವು ಅನುಮಾನಾಸ್ಪದ ಅಂಶಗಳು ಕಂಡು ಬಂದಿದೆ. ಹಸುವಿನ ಸಗಣಿ, ಹಸುವಿನ ಮೂತ್ರ, ಮಡಕೆಗಳು, ಕಚ್ಚಾ ವಸ್ತುಗಳು ಮತ್ತು ಯಂತ್ರಗಳಿಗೆ 1.92 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಆದರೆ, ಇದರ ಮಾರುಕಟ್ಟೆ ಮೌಲ್ಯ ಕೇವಲ 15 ರಿಂದ 20 ಲಕ್ಷ ರೂ.ಗಳಷ್ಟಿತ್ತು ಎಂದು ಆರೋಪಿಸಲಾಗಿದೆ. ಸಂಶೋಧನೆಯ ನೆಪದಲ್ಲಿ ಗೋವಾ ಮತ್ತು ಬೆಂಗಳೂರು ಸೇರಿದಂತೆ ಹಲವು ನಗರಗಳಿಗೆ 23 ರಿಂದ 24 ಬಾರಿ ವಿಮಾನ ಪ್ರಯಾಣವನ್ನು ನಡೆಸಲಾಗಿದೆ.
ಪಂಚಗವ್ಯ ಯೋಜನೆಯ "ಸೋಗಿನಲ್ಲಿ" ವಿಶ್ವವಿದ್ಯಾನಿಲಯದ ತಂಡವು ಗೋವಾಕ್ಕೆ ಭೇಟಿ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸುಮಾರು 7.5 ಲಕ್ಷ ರೂ. ಮೌಲ್ಯದ ಕಾರನ್ನು ಖರೀದಿಸಲಾಗಿದೆ. ಅದು ಮೂಲ ಅಂದಾಜಿನ ಭಾಗವಾಗಿಲ್ಲ ಎಂದು ತನಿಖಾ ಸಂಸ್ಥೆಯು ತಿಳಿಸಿದೆ. ಇಂಧನ ಮತ್ತು ನಿರ್ವಹಣೆಗಾಗಿ 7.5 ಲಕ್ಷ ರೂ.ಗಳಿಗೂ ಹೆಚ್ಚಿನ ವೆಚ್ಚ ಮಾಡಲಾಗಿದೆ. ಕಾರ್ಮಿಕರಿಗೆ ವೇತನವಾಗಿ 3.5 ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದು ಲೆಕ್ಕಾಚಾರದಲ್ಲಿ ಹೇಳಲಾಗಿದೆ. ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆ ಸುಮಾರು 15 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ. ವರದಿಯ ಪ್ರಕಾರ, ಇದು ಸಂಶೋಧನಾ ಉದ್ದೇಶಕ್ಕೆ ಅನಿವಾರ್ಯವಾಗಿರಲಿಲ್ಲ.
10 ವರ್ಷ ಸಂಶೋಧನೆ ನಡೆಸಿದರೂ ಪಂಚಗವ್ಯ ಸೂತ್ರೀಕರಣವನ್ನು ಬಳಸಿಕೊಂಡು ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಂಶೋಧನೆಯು ವಿಫಲವಾಗಿದೆ ಎಂದು ಹೇಳಿದೆ. ಹೆಚ್ಚುವರಿ ಜಿಲ್ಲಾಧಿಕಾರಿಗಳು ಈ ಕುರಿತ ವರದಿಯನ್ನು ಜಿಲ್ಲಾಧಿಕಾರಿಗಳು ಮತ್ತು ವಿಭಾಗೀಯ ಆಯುಕ್ತರಿಗೆ ಕಳುಹಿಸಿದ್ದಾರೆ.
ಆರೋಪವನ್ನು ನಿರಾಕರಿಸಿದ ನಾನಾಜಿ ದೇಶಮುಖ್ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ
ವಿಶ್ವವಿದ್ಯಾಲಯವು ಅವ್ಯವಹಾರಗಳ ಕುರಿತ ಆರೋಪವನ್ನು ನಿರಾಕರಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ವಿವಿ ರಿಜಿಸ್ಟ್ರಾರ್ ಡಾ. ಎಸ್.ಎಸ್. ತೋಮರ್ ಆರೋಪಗಳನ್ನು ತಳ್ಳಿಹಾಕಿದ್ದು, ಪ್ರತಿಯೊಂದು ಖರೀದಿ ಮತ್ತು ಪಾವತಿಗಳು ಸರಕಾರಿ ನಿಯಮಗಳು ಮತ್ತು ಟೆಂಡರ್ ಪ್ರಕ್ರಿಯೆಗಳ ಮೂಲಕವೇ ನಡೆದಿದೆ ಎಂದು ಹೇಳಿದ್ದಾರೆ.
ಪಂಚಗವ್ಯ ಯೋಜನೆಯು 2012ರಿಂದ ನಡೆಯುತ್ತಿದೆ. ಯಂತ್ರಗಳು ಅಥವಾ ವಾಹನಗಳೇ ಆಗಲಿ ಎಲ್ಲಾ ಖರೀದಿಗಳನ್ನು ಮುಕ್ತವಾಗಿ ಟೆಂಡರ್ ಮೂಲಕ ನಡೆಸಲಾಗಿದೆ. ಸರಕಾರಿ ನಿಯಮಗಳನ್ನು ಅನುಸರಿಸಲಾಗಿದೆ. ಯಾವುದೇ ಅಕ್ರಮಗಳು ನಡೆದಿಲ್ಲ. ಖರ್ಚು-ವೆಚ್ಚಗಳ ಲೆಕ್ಕಪರಿಶೋಧನೆ ನಡೆಸಲಾಗಿದೆ. ತನಿಖಾ ಸಮಿತಿಗೆ ಎಲ್ಲಾ ದಾಖಲೆಗಳನ್ನು ಒದಗಿಸಲಾಗಿದೆ. ಯಾವುದೇ ಸತ್ಯಾಂಶಗಳನ್ನು ಮರೆಮಾಚಲಾಗಿಲ್ಲ ಎಂದು ಹೇಳಿದ್ದಾರೆ.







