ಉತ್ತರ ಪ್ರದೇಶ | ಪುತ್ರಿಗೆ ಇನ್ಸುಲಿನ್ ಖರೀದಿಸಲೂ ಸಾಧ್ಯವಾಗುತ್ತಿಲ್ಲ: ಫೇಸ್ ಬುಕ್ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ತಂದೆ!

PC: NDTV
ಲಕ್ನೊ: "ನನ್ನ ಮಧುಮೇಹ ಪೀಡಿತ ಪುತ್ರಿಗೆ ಇನ್ಸುಲಿನ್ ಇಂಜೆಕ್ಷನ್ ಖರೀದಿಸಲೂ ಸಾಧ್ಯವಾಗುತ್ತಿಲ್ಲ" ಎಂದು ಫೇಸ್ ಬುಕ್ ಲೈವ್ ವೀಡಿಯೋ ಪ್ರಸಾರದಲ್ಲಿ ಅಳುತ್ತಾ, ಉತ್ತರ ಪ್ರದೇಶದ ಲಕ್ನೊದ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರು ತಲೆಗೆ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ.
ಮೃತಪಟ್ಟ ವ್ಯಕ್ತಿಯ ಗುರುತನ್ನು ಪೊಲೀಸರಿನ್ನೂ ಬಹಿರಂಗಗೊಳಿಸದಿದ್ದರೂ, ತನ್ನ ರಿಯಲ್ ಎಸ್ಟೇಟ್ ಕಚೇರಿಯಲ್ಲಿದ್ದ ಭದ್ರತಾ ಸಿಬ್ಬಂದಿಯ ಬಂದೂಕಿನಿಂದ ತಲೆಗೆ ಗುಂಡಿಟ್ಟುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ತನ್ನ ಸಾವಿಗೂ ಮುನ್ನ ಫೇಸ್ ಬುಕ್ ನಲ್ಲಿ ಲೈವ್ ವೀಡಿಯೋ ಪ್ರಸಾರದಲ್ಲಿ ಕಾಣಿಸಿಕೊಂಡಿದ್ದ ಮೃತ ರಿಯಲ್ ಎಸ್ಟೇಟ್ ಉದ್ಯಮಿ, ನನ್ನ ಕುಟುಂಬಕ್ಕೆ ನೆರವು ನೀಡುವಂತೆ ಚಲನಚಿತ್ರ ತಾರೆಯರು ಹಾಗೂ ಉದ್ಯಮಿಗಳಿಗೆ ಮನವಿ ಮಾಡಿದ್ದಾರೆ. ಇನ್ನು ಮುಂದೆ ಬಾಕಿಯಿರುವ ಸಾಲ ಹಾಗೂ ಹಣಕಾಸು ಅಗತ್ಯಗಳನ್ನು ಭರಿಸಲು ಸಾಧ್ಯವಿಲ್ಲ ಎಂದೂ ಅವರು ಅಳಲು ತೋಡಿಕೊಂಡಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೂಕ್ತ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.





