ಉತ್ತರಾಖಂಡ | ದಿಢೀರ್ ಪ್ರವಾಹದಲ್ಲಿ ಕಾರಿನೊಂದಿಗೆ ಕೊಚ್ಚಿ ಹೋದ ಜನರು; ವಿಡಿಯೊ ವೈರಲ್

PC : NDTV
ಡೆಹ್ರಾಡೂನ್: ಮಂಗಳವಾರ ಉತ್ತರಾಖಂಡದಲ್ಲಿ ಸಂಭವಿಸಿದ ಪ್ರಬಲ ಮೇಘ ಸ್ಪೋಟದಿಂದುಂಟಾದ ದಿಢೀರ್ ಪ್ರವಾಹದಲ್ಲಿ ಜನರು ಕಾರಿನೊಂದಿಗೆ ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯ ವಿಡಿಯೊವೊಂದರಲ್ಲಿ ಸೆರೆಯಾಗಿದೆ.
ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಂಗಳವಾರ ಉತ್ತರ ಕಾಶಿ ಜಿಲ್ಲೆಯ ಹರ್ಷಿಲ್ ಬಳಿಯ ಧಾರಾಲಿ ಪ್ರದೇಶದಲ್ಲಿ ಅಪ್ಪಳಿಸಿದ ಮೇಘಸ್ಫೋಟದಿಂದುಂಟಾದ ದಿಢೀರ್ ಪ್ರವಾಹದಿಂದಾಗಿ ಈ ಪ್ರಾಂತ್ಯದಲ್ಲಿ ವ್ಯಾಪಕ ಪ್ರಮಾಣದ ಹಾನಿಯುಂಟಾಗಿದೆ.
ಕೆಸರುಮಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಕಾರನ್ನು ಕಂಡು, “ಅಲ್ಲಿ ನೋಡಿ ಕಾರು” ಎಂದು ಓರ್ವ ವ್ಯಕ್ತಿ ಕಿರುಚಿಕೊಳ್ಳುತ್ತಿರುವುದು ಈ ವಿಡಿಯೊದಲ್ಲಿ ದಾಖಲಾಗಿದೆ.
“ಕಾರಿನ ತುಂಬಾ ಜನರಿದ್ದಾರೆ” ಎಂದು ಮತ್ತೊಬ್ಬ ವ್ಯಕ್ತಿ ಹೇಳುತ್ತಿರುವುದನ್ನೂ ಈ ವಿಡಿಯೊದಲ್ಲಿ ನೋಡಬಹುದು. “ಅದರಲ್ಲಿ ಜನರಿದ್ದಾರೆಯೆ?” ಎಂದು ಮತ್ತೊಬ್ಬ ವ್ಯಕ್ತಿ ಅವರನ್ನು ಪ್ರಶ್ನಿಸುತ್ತಿರುವುದು ಈ ವಿಡಿಯೊದಲ್ಲಿ ಸೆರೆಯಾಗಿದೆ.
Video: Car, With People Inside, Swept Away In Uttarakhand Flash Flood https://t.co/TmYz9mER5j pic.twitter.com/hrM5DoKxlL
— NDTV (@ndtv) August 5, 2025
ಈ ಮೇಘ ಸ್ಫೋಟವು ಹರ್ಷಿಲ್ ಬಳಿಯಿರುವ ಭಾರತೀಯ ಸೇನಾ ಶಿಬಿರದಿಂದ ಕೇವಲ ಕಿ.ಮೀ. ದೂರವಿರುವ ಧಾರಾಲಿ ಗ್ರಾಮ ಪ್ರದೇಶದಲ್ಲಿ ಮಧ್ಯಾಹ್ನ ಸುಮಾರು 1.45ರ ವೇಳೆಗೆ ಸಂಭವಿಸಿತು. ಗಂಗೋತ್ರಿಗೆ ತೆರಳುವುದಕ್ಕೂ ಮುನ್ನ ಧಾರಾಲಿ ಪ್ರಮುಖ ತಂಗುದಾಣವಾಗಿದ್ದು, ಹಲವಾರು ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಹಾಗೂ ಹೋಂ ಸ್ಟೇಗಳಿಗೆ ನೆಲೆಯಾಗಿದೆ. ಖೀರ್ ಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಈ ಮೇಘ ಸ್ಫೋಟ ಸಂಭವಿಸಿದ್ದು, ವಿನಾಶಕಾರಿ ಪ್ರವಾಹವನ್ನು ಸೃಷ್ಟಿಸಿತು ಎಂದು ಸ್ಥಳೀಯರು ತಿಳಿಸಿದ್ದಾರೆ.







