ಡಚ್ ಕರಾವಳಿಯಲ್ಲಿ ಸರಕು ಸಾಗಣೆ ಹಡಗಿನಲ್ಲಿ ಬೆಂಕಿ: ಭಾರತೀಯ ಸಿಬ್ಬಂದಿ ಸಾವು, 20 ಮಂದಿಗೆ ಗಾಯ

ಲಂಡನ್: ನೆದರ್ರ್ ಲ್ಯಾಂಡ್ಸ್ ಕರಾವಳಿಯಲ್ಲಿ ಸುಮಾರು 3,000 ಕಾರುಗಳನ್ನು ಸಾಗಿಸುತ್ತಿದ್ದ ಸರಕು ಸಾಗಣೆ ಹಡಗಿನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡ ಪರಿಣಾಮ ಒಬ್ಬ ಭಾರತೀಯ ಸಿಬ್ಬಂದಿ ಸಾವನ್ನಪ್ಪಿದರು ಹಾಗೂ 20 ಮಂದಿ ಗಾಯಗೊಂಡರು ಬೆಂಕಿ ಹಲವಾರು ದಿನಗಳವರೆಗೆ ಇರುತ್ತದೆ ಎಂದು ಡಚ್ ಕರಾವಳಿ ರಕ್ಷಕರು ಎಚ್ಚರಿಸಿದ್ದಾರೆ.
ಜರ್ಮನಿಯಿಂದ ಈಜಿಪ್ಟ್ ಗೆ ತೆರಳುತ್ತಿದ್ದ 199 ಮೀಟರ್ ಪನಾಮ ನೋಂದಣಿಯ 'ಫ್ರೀಮೆಂಟಲ್ ಹೈವೇ' ಹೆಸರಿನ ಹಡಗಿನಲ್ಲಿ ಮಂಗಳವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಹಲವಾರು ಸಿಬ್ಬಂದಿ ಸದಸ್ಯರು ನೀರಿಗೆ ಜಿಗಿದು ಪಾರಾಗಲು ಯತ್ನಿಸಿದರು.
ಬೆಂಕಿಯು ಭಾರತೀಯ ಪ್ರಜೆಯ ಸಾವಿಗೆ ಕಾರಣವಾಗಿದೆ ಎಂದು ನೆದರ್ ಲ್ಯಾಂಡ್ಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಹೇಳಿದೆ.
"ಉತ್ತರ ಸಮುದ್ರದಲ್ಲಿ 'ಫ್ರೀಮೆಂಟಲ್ ಹೈವೇ' ಹಡಗಿನಲ್ಲಿ ಉಂಟಾಗಿರುವ ಅಗ್ನಿ ಅವಘಡ ಘಟನೆಯಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ, ಇದರ ಪರಿಣಾಮವಾಗಿ ಭಾರತೀಯ ನಾವಿಕರೊಬ್ಬರು ಸಾವನ್ನಪ್ಪಿದ್ದು, ಸಿಬ್ಬಂದಿಗೆ ಗಾಯಗಳಾಗಿವೆ" ಎಂದು ಅದು ಬುಧವಾರ ಟ್ವೀಟ್ನಲ್ಲಿ ತಿಳಿಸಿದೆ.
ರಾಯಭಾರ ಕಚೇರಿಯು ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಹಾಗೂ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರಲು ಸಹಾಯ ಮಾಡುತ್ತಿದೆ ಎಂದು ಹೇಳಿದೆ.
ಉಳಿದ 20 ಗಾಯಗೊಂಡ ಸಿಬ್ಬಂದಿಗಳೊಂದಿಗೆ ರಾಯಭಾರ ಕಚೇರಿ ಸಂಪರ್ಕದಲ್ಲಿದೆ, ಅವರು ಸುರಕ್ಷಿತವಾಗಿದ್ದಾರೆ ಹಾಗೂ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಚ್ ಅಧಿಕಾರಿಗಳು ಮತ್ತು ಶಿಪ್ಪಿಂಗ್ ಕಂಪನಿಯ ಸಮನ್ವಯದಲ್ಲಿ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡಲಾಗುತ್ತಿದೆ ಎಂದು ರಾಯಭಾರ ಕಚೇರಿ ಹೇಳಿದೆ.
ಕೆಲವರು ನೀರಿನಲ್ಲಿ ಹಾರಿದ ನಂತರ 23 ಸಿಬ್ಬಂದಿಯನ್ನು ರಕ್ಷಿಸಲು ದೋಣಿಗಳು ಹಾಗೂ ಹೆಲಿಕಾಪ್ಟರ್ ಗಳನ್ನು ಬಳಸಲಾಯಿತು ಎಂದು ಡಚ್ ಕೋಸ್ಟ್ಗಾರ್ಡ್ ನ ವಕ್ತಾರರು ಬುಧವಾರ CNNಗೆ ತಿಳಿಸಿದರು.