ಮುಂಬೈ | ಆಕ್ಷೇಪಾರ್ಹ ಕಲಾಕೃತಿ ಪ್ರದರ್ಶನ : ಕಲಾವಿದ, ಆರ್ಟ್ ಗ್ಯಾಲರಿ ಮೇಲ್ವಿಚಾರಕರ ವಿರುದ್ಧ ಪ್ರಕರಣ

ಸಾಂದರ್ಭಿಕ ಚಿತ್ರ
ಮುಂಬೈ,ಸೆ.27: ದೇವರು ಮತ್ತು ದೇವಿಯರ ಆಕ್ಷೇಪಾರ್ಹ ವರ್ಣ ಕಲಾಕೃತಿಯನ್ನು ಪ್ರದರ್ಶಿಸಿದ್ದಕ್ಕಾಗಿ ಹಾಗೂ ಅಪ್ರಾಪ್ತ ವಯಸ್ಕರ ಪ್ರವೇಶವನ್ನು ನಿಷೇಧಿಸದ್ದಕ್ಕಾಗಿ ಕಲಾವಿದ ಟಿ.ವೆಂಕಣ್ಣ ಮತ್ತು ಗ್ಯಾಲರಿ ಮಸ್ಕರಾ ಪ್ರದರ್ಶನ ಕೇಂದ್ರದ ಮೇಲ್ವಿಚಾರಕ ಅಭಯ ಮಸ್ಕರಾ ವಿರುದ್ಧ ಮುಂಬೈ ಪೋಲಿಸರು ಪ್ರಕರಣವನ್ನು ದಾಖಲಿಸಿದ್ದಾರೆ.
ಕೊಲಾಬಾದ ಗ್ಯಾಲರಿಯಲ್ಲಿ ಸೆ.11ರಿಂದ ಸೆ.25ರವರೆಗೆ ವೆಂಕಣ್ಣ ಅವರ ‘ದಿ ಹ್ಯೂಮನ್ ಥಿಯೇಟರ್’ನ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ವಕೀಲರೋರ್ವರ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿದೆ.
‘ಯೂನಿಯನ್ ಫಾರ್ ಪೀಸ್’ ಶೀರ್ಷಿಕೆಯ ಕಲಾಕೃತಿಯ ಕುರಿತು ತಾನು ಪ್ರಶ್ನಿಸಿದಾಗ ಗ್ಯಾಲರಿಯ ಸಿಬ್ಬಂದಿಗಳು ಪ್ರತ್ಯೇಕ ಕೊಠಡಿಗಳನ್ನು ಸೇರಿಕೊಂಡಿದ್ದರು ಮತ್ತು ತನ್ನ ಪ್ರಶ್ನೆಗಳಿಂದ ನುಣುಚಿಕೊಂಡಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ.
ಅಶ್ಲೀಲ ಪುಸ್ತಕಗಳ ಮಾರಾಟ, ಮಕ್ಕಳಿಗೆ ಅಶ್ಲೀಲ ವಸ್ತುಗಳ ಮಾರಾಟ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಕೃತ್ಯಗಳಿಗೆ ಸಂಬಂಧಿಸಿದ ಬಿಎನ್ಎಸ್ ಕಲಂಗಳಡಿ ವೆಂಕಣ್ಣ ಮತ್ತು ಮಸ್ಕರಾ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ವರ್ಣಚಿತ್ರವು ಧರ್ಮವನ್ನು ಗುರಿಯಾಗಿಸಿಕೊಂಡಿದೆ ಎಂದು ತಪ್ಪಾಗಿ ಅರ್ಥೈಸಲಾಗಿದೆ ಎಂಬ ಕಲಾವಿದ ವೆಂಕಣ್ಣ ಅವರ ಹೇಳಿಕೆಯನ್ನು ಮಸ್ಕರಾ ಸುದ್ದಿಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಮಹಿಳೆ ಲೈಂಗಿಕ ಹಿಂಸೆಯ ವಿರುದ್ಧ ನಾಯಕಿಯಾಗಿ ನಿಂತಿದ್ದಾಳೆ. ಆಕೆಯ ಕೆಳಗಿರುವ ಪುರುಷ ಅದಾಗಲೇ ಮೃತಪಟ್ಟಿದ್ದು ತನ್ನ ಕ್ರಿಮಿನಲ್ ಕೃತ್ಯಗಳಿಗೆ ದಂಡಿಸಲ್ಪಟ್ಟಿರುವ ಅಪರಾಧಿಯನ್ನು ಪ್ರತಿನಿಧಿಸಿದ್ದಾನೆ ಎಂದು ವೆಂಕಣ್ಣ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.







