438 ಕೋಟಿ ರೂ. ಮೌಲ್ಯದ ಮೆಫೆಡ್ರೋನ್ ವಶ ಪ್ರಕರಣ: ಅಂತಾರಾಷ್ಟ್ರೀಯ ಡ್ರಗ್ ಕಳ್ಳಸಾಗಣೆದಾರ ಸಲೀಂ ಡೋಲಾ ಬಂಧನ

ಸಲೀಂ ಡೋಲಾ | Photo Credit : PTI
ಅಹ್ಮದಾಬಾದ್: 2022ರಲ್ಲಿ ವಡೋದರಾ ಕಾರ್ಖಾನೆಯಿಂದ 438.64 ಕೋಟಿ ರೂ.ಮೌಲ್ಯದ ಮೆಫೆಡ್ರೋನ್ ವಶ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ವರ್ಷದ ಆರಂಭದಲ್ಲಿ ತುರ್ಕಿಯೆಯಿಂದ ಗಡೀಪಾರು ಮಾಡಲಾಗಿದ್ದ ಅಂತರರಾಷ್ಟ್ರೀಯ ಮಾದಕ ದ್ರವ್ಯ ಕಳ್ಳಸಾಗಣೆದಾರ ಸಲೀಂ ಇಸ್ಮಾಯಿಲ್ ಡೋಲಾನನ್ನು ಗುಜರಾತ್ ಭಯೋತ್ಪಾದನೆ ನಿಗ್ರಹ ದಳವು (ಎಟಿಎಸ್) ಅ.31ರಂದು ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಡೋಲಾ ಡ್ರಗ್ ತಯಾರಿಕೆಗೆ ಬಳಸುವ ರಾಸಾಯನಿಕಗಳನ್ನು ಪೂರೈಸುತ್ತಿದ್ದ ಮತ್ತು ನಂತರ ತಯಾರಾದ ಉತ್ಪನ್ನವನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಡೋಲಾ ನಡೆಸುತ್ತಿದ್ದ ಈ ಜಾಲವು ಕಾನೂನುಬದ್ಧವಾಗಿ ರಫ್ತು ಮಾಡಲಾಗುವ ಸರಕುಗಳನ್ನು ಹೊಂದಿರುವ ಕಂಟೈನರ್ಗಳಲ್ಲಿ ಮಾದಕ ದ್ರವ್ಯಗಳನ್ನು ಬಚ್ಚಿಟ್ಟು ವಿದೇಶಗಳಿಗೆ ಸಾಗಿಸುತ್ತಿತ್ತು. ಈ ಕಾರ್ಯಾಚರಣೆಗಳನ್ನು ಸುಲಭಗೊಳಿಸಲು ಗಮ್ಯ ದೇಶಗಳಲ್ಲಿ ನಕಲಿ ಕಂಪನಿಗಳನ್ನು ಸ್ಥಾಪಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಕೋರಿಕೆಯ ಮೇರೆಗೆ ಮಾರ್ಚ್ 2024ರಲ್ಲಿ ಹೊರಡಿಸಲಾದ ಇಂಟರ್ಪೋಲ್ ರೆಡ್ ನೋಟಿಸ್ ಆಧಾರದಲ್ಲಿ ಈ ವರ್ಷದ ಎಪ್ರಿಲ್ನಲ್ಲಿ ತುರ್ಕಿಯೆದಲ್ಲಿ ಬಂಧಿಸಲ್ಪಟ್ಟಿದ್ದ ಡೋಲಾನನ್ನು ಮಾದಕ ದ್ರವ್ಯ ನಿಯಂತ್ರಣ ಘಟಕವು (ಎನ್ಸಿಬಿ) ಭಾರತಕ್ಕೆ ಕರೆತಂದಿತ್ತು.
ದಾವೂದ್ ಇಬ್ರಾಹಿಂನ ಆಪ್ತ ಸಹಚರ ಎಂದು ಬಣ್ಣಿಸಲಾಗಿರುವ ಡೋಲಾ, ಭಾರತದಲ್ಲಿ ಮಾದಕ ದ್ರವ್ಯ ಸಾಗಣೆ ಆರೋಪಗಳನ್ನು ಎದುರಿಸುತ್ತಿದ್ದಾನೆ ಮತ್ತು ಗಡಿಯಾಚೆಗಿನ ಮಾದಕದ್ರವ್ಯ ಜಾಲವನ್ನು ನಡೆಸುತ್ತಿರುವ ಆರೋಪಿಯಾಗಿದ್ದಾನೆ.






