ಹಲ್ಲೆ, ನಿಂದನೆ ಆರೋಪ : ಪಂಜಾಬ್ ಕಿಂಗ್ಸ್ ಸ್ಟಾರ್ ಬ್ಯಾಟರ್ ಶಶಾಂಕ್ ಸಿಂಗ್ ವಿರುದ್ಧ ಪ್ರಕರಣ ದಾಖಲು

Photo | ndtv
ಭೋಪಾಲ್ : ಪಂಜಾಬ್ ಕಿಂಗ್ಸ್ ಆಟಗಾರ ಶಶಾಂಕ್ ಸಿಂಗ್ ಮತ್ತು ಅವರ ತಂದೆ, ನಿವೃತ್ತ ಐಪಿಎಸ್ ಅಧಿಕಾರಿ ಶೈಲೇಶ್ ಸಿಂಗ್ ವಿರುದ್ಧ ಅಡುಗೆ ಕೆಲಸಗಾರನ ಮೇಲೆ ಹಲ್ಲೆ, ನಿಂದನೆ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.
ಭೋಪಾಲ್ನ ರತಿಬಾದ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಾಗಿದೆ. ಶಶಾಂಕ್ ಸಿಂಗ್ ಮತ್ತು ಅವರ ತಂದೆ, ನಿವೃತ್ತ ಐಪಿಎಸ್ ಅಧಿಕಾರಿ ಶೈಲೇಶ್ ಸಿಂಗ್, ಚಾಲಕ ಮಿಶ್ರಾ ವಿರುದ್ಧ ಹಲ್ಲೆ, ನಿಂದನೆ ಹಾಗೂ ಮೊಬೈಲ್ ಫೋನ್ ಕಸಿದುಕೊಂಡಿರುವ ಆರೋಪ ಹೊರಿಸಲಾಗಿದೆ.
ರೇವಾ ಜಿಲ್ಲೆಯ ನಿವಾಸಿಯಾದ ವಿಪೇಂದ್ರ ಸಿಂಗ್ ತೋಮರ್ ರನ್ನು ಶಶಾಂಕ್ ಸಿಂಗ್ ಕುಟುಂಬ ಜೂನ್ 25ರಂದು ತಿಂಗಳಿಗೆ 15,000 ವೇತನ ನೀಡುವ ಭರವಸೆಯೊಂದಿಗೆ ಅಡುಗೆ ಕೆಲಸಕ್ಕೆ ನೇಮಿಸಿತ್ತು. ಈ ವೇಳೆ ಉಚಿತ ಊಟ, ವಸತಿ ಹಾಗೂ ಭವಿಷ್ಯದಲ್ಲಿ ಸರಕಾರಿ ಉದ್ಯೋಗ ಪಡೆಯಲು ಸಹಾಯ ಮಾಡುವ ಭರವಸೆಯೂ ನೀಡಲಾಗಿತ್ತು. ಆದರೆ " ಕೆಲಸಕ್ಕೆ ಸೇರಿಕೊಂಡ ಕೆಲವೇ ದಿನಗಳಲ್ಲಿ ನಿಂದನೆ ಪ್ರಾರಂಭವಾಗಿದೆ. ಯಾರನ್ನೂ ಸಂಪರ್ಕಿಸದಂತೆ ಮೊಬೈಲ್ ಫೋನ್ ಅನ್ನು ಬಲವಂತವಾಗಿ ಕಸಿದುಕೊಳ್ಳಲಾಗಿದೆ. ಬಳಿಕ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ" ಎಂದು ವಿಪೇಂದ್ರ ಸಿಂಗ್ ತೋಮರ್ ಆರೋಪಿಸಿದ್ದಾರೆ.
ಈ ಕುರಿತು ರತಿಬಾದ್ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಆಟಗಾರರಾಗಿರುವ ಶಶಾಂಕ್ ಸಿಂಗ್ ಬಲಿಷ್ಠ ಬ್ಯಾಟಿಂಗ್ ಮಾಡುವ ಫಿನಿಶರ್ ಎಂದೇ ಗುರುತಿಸಿಕೊಂಡಿದ್ದು , ಇತ್ತೀಚೆಗೆ ಮುಕ್ತಾಯಗೊಂಡ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. 12 ಪಂದ್ಯಗಳಲ್ಲಿ ಆಡಿದ ಶಶಾಂಕ್ ಸಿಂಗ್ ಒಟ್ಟು 132 ರನ್ ಗಳಿಸಿದ್ದು, 188.57ರ ಸ್ಟ್ರೈಕ್ ರೇಟ್ ಹೊಂದಿದ್ದರು.






