ಜಾತಿಗಣತಿ ನಡೆಸಲು ಕೇಂದ್ರ ಸರಕಾರ ನಿರ್ಧಾರ

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (PTI)
ಹೊಸದಿಲ್ಲಿ: ಮುಂದಿನ ರಾಷ್ಟ್ರೀಯ ಜನಗಣತಿಯ ಜೊತೆ ಜಾತಿ ಗಣತಿಯನ್ನು ಕೂಡಾ ನಡೆಸಲಾಗುವುದೆಂದು ಕೇಂದ್ರ ಸರಕಾರ ಘೋಷಿಸಿದೆ. ಬುಧವಾರ ನಡೆದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದರೊಂದಿಗೆ ರಾಷ್ಟ್ರೀಯ ಜಾತಿಗಣತಿ ನಡೆಸಬೇಕೆಂಬ ಕಾಂಗ್ರೆಸ್ ಸಹಿತ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಬಲವಾದ ಬೇಡಿಕೆಗೆ ಕೊನೆಗೂ ಮೋದಿ ಸರಕಾರ ಮಣಿದಂತಾಗಿದೆ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ‘‘ಮುಂಬರುವ ಜನಗಣತಿಯಲ್ಲಿ ಜಾತಿಗಣತಿಯನ್ನು ಕೂಡಾ ಸೇರ್ಪಡೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆ ನಿರ್ಧರಿಸಿದೆ. ನಮ್ಮ ಸರಕಾರವು ನಮ್ಮ ದೇಶದ ಮೌಲ್ಯಗಳು ಹಾಗೂ ಹಿತಾಸಕ್ತಿಗಳನ್ನು ರಕ್ಷಿಸಲು ಬದ್ಧವಾಗಿರುವುದನ್ನು ಇದು ತೋರಿಸುತ್ತದೆ. ಈ ಹಿಂದೆಯೂ ನಮ್ಮ ಸರಕಾರವು ಸಮಾಜದ ಆರ್ಥಿಕ ದುರ್ಬಲ ವರ್ಗಗಳಿಗೆ 10 ಶೇಕಡ ಮೀಸಲಾತಿಯನ್ನು ಜಾರಿಗೊಳಿಸಿತ್ತು’’ ಎಂದವರು ಹೇಳಿದರು.
ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಜಾತಿಗಣತಿಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆಯೆಂದು ವೈಷ್ಣವ್ ಆಪಾದಿಸಿದರು.
‘‘ಕಾಂಗ್ರೆಸ್ ಸರಕಾರವು ಸದಾ ಕಾಲವೂ ಜಾತಿಗಣತಿಯನ್ನು ವಿರೋಧಿಸುತ್ತಾ ಬಂದಿತ್ತು. ಸ್ವಾತಂತ್ರ್ಯಾನಂತರ ನಡೆದ ಯಾವುದೇ ಜನಗಣತಿ ಅಭಿಯಾನಗಳಲ್ಲಿ ಜಾತಿಯನ್ನು ಸೇರ್ಪಡೆಗೊಳಿಸಿರಲಿಲ್ಲ. 2010ರಲ್ಲಿ ಆಗಿನ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ಅವರು ಜನಗಣತಿಯಲ್ಲಿ ಜಾತಿಗಣತಿಯನ್ನು ಕೂಡಾ ಸೇರ್ಪಡೆಗೊಳಿಸುವ ಬಗ್ಗೆ ಪರಿಶೀಲಿಸುವುದಾಗಿ ಲೋಕಸಭೆಗೆ ಭರವಸೆ ನೀಡಿದ್ದರು. ಈ ವಿಷಯದ ಬಗ್ಗೆ ಪರಿಶೀಲನೆ ನಡೆಸಲು ಹೆಚ್ಚಿನ ರಾಜಕೀಯ ಪಕ್ಷಗಳು ಕೂಡಾ ಶಿಫಾರಸು ಮಾಡಿದ್ದವು. ಇವೆಲ್ಲದರ ಹೊರತಾಗಿಯೂ ಕಾಂಗ್ರೆಸ್ ಸರಕಾರವು ಜಾತಿಗಣತಿಯ ಬದಲಿಗೆ ಕೇವಲ ಜಾತಿ ಸಮೀಕ್ಷೆಯನ್ನು ನಡೆಸಲು ನಿರ್ಧರಿಸಿತ್ತು. ಈ ಸಮೀಕ್ಷೆಯನ್ನು ಸಾಮಾಜಿಕ ಹಾಗೂ ಆರ್ಥಿಕ ಜಾತಿಗಣತಿ ಎಂಬುದಾಗ್ನಿ ಕರೆಯಲಾಗಿತ್ತು’’ ಎಂದವರು ಹೇಳಿದರು.
ಕಾಂಗ್ರೆಸ್ ಹಾಗೂ ಅದರ ಇಂಡಿ ಮೈತ್ರಿಕೂಟದ ಪಾಲುದಾರರು ಜಾತಿಗಣತಿಯನ್ನು ರಾಜಕೀಯ ಅಸ್ತ್ರವನ್ನು ಬಳಸುತ್ತಿದೆ ಎಂದವರು ಆಪಾದಿಸಿದರು.
ಭಾರತ ಸಂವಿಧಾನದ ಪ್ರಕಾರ, ಜಾತಿಗಣತಿ ಕೇಂದ್ರಕ್ಕೆ ಸಂಬಂಧಿಸಿದ ವಿಷಯವಾಗಿದೆ. ಕೆಲವು ರಾಜ್ಯಗಳು ಜಾತಿಗಣತಿಗಾಗಿ ಸಮೀಕ್ಷೆಗಳನ್ನು ನಡೆಸಿವೆ. ಇನ್ನು ಕೆಲವು ರಾಜ್ಯಗಳು ರಾಜಕೀಯ ದುರುದ್ದೇಶದಿಂದ ಅಪಾರದರ್ಶಕವಾಗಿ ಇಂತಹ ಸಮೀಕ್ಷೆಗಳನ್ನು ನಡೆಸಿವೆಯೆಂದು ಅವರು ಆಪಾದಿಸಿದರು.
‘‘ಇಂತಹ ಸಮೀಕ್ಷೆಗಳು ಸಮಾಜದಲ್ಲಿ ಸಂದೇಹಗಳನ್ನು ಸೃಷ್ಟಿಸಿವೆ. ಈ ಎಲ್ಲಾ ವಾಸ್ತವಗಳನ್ನು ಪರಿಗಣನೆಗೆ ತೆಗೆದುಕೊಂಡು ಹಾಗೂ ನಮ್ಮ ಸಾಮಾಜಿಕ ಸಂರಚನೆಯನ್ನು ರಾಜಕೀಯವು ಹದಗೆಡಿಸದಂತೆ ನೋಡಿಕೊಳ್ಳಲು, ಸಮೀಕ್ಷೆಗಳ ಬದಲು ಜಾತಿಗಣತಿಯನ್ನು ಪಾರದರ್ಶಕವಾಗಿ ನಡೆಸಬೇಕಾಗಿದೆ. ಇದರಿಂದ ದೇಶದ ಸಾಮಾಜಿಕ ಹಾಗೂ ಆರ್ಥಿಕ ಸಂರಚನೆ ಬಲಗೊಳ್ಳಲಿದೆಯೆಂದು ವೈಷ್ಣವ್ ತಿಳಿಸಿದರು.
ಮೇಘಾಲಯ ಹಾಗೂ ಅಸ್ಸಾಂ ರಾಜ್ಯಗಳನ್ನು ಸಂಪರ್ಕಿಸುವ 166.8 ಕಿ.ಮೀ. ವಿಸ್ತೀರ್ಣದ ಶಿಲ್ಲಾಂಗ್-ಸಿಲ್ಚಾರ್ ಚತುಷ್ಪಥ ಕಾರಿಡಾರ್ ಹೆದ್ದಾರಿಯ ನಿರ್ಮಾಣಕ್ಕೂ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ಹೆದ್ದಾರಿಯು ಮಣಿಪುರ ಹಾಗೂ ಮಿರೆರಾಂ ರಾಜ್ಯಗಳ ಜನರ ನಡುವೆ ಸಂಪರ್ಕವನ್ನು ಒದಗಿಸಲಿದೆ ಎಂದು ವೈಷ್ಣವ್ ತಿಳಿಸಿದ್ದಾರೆ.
* ಜಾತಿಗಣತಿಯ ಬಗ್ಗೆ ನಿರಾಸಕ್ತಿ ಪ್ರದರ್ಶಿಸಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಜಾತಿಗಣತಿಯ ಅಸ್ತ್ರವನ್ನು ಬಳಸಲು ಹೊರಟಿದೆಯೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
►ಕೇಂದ್ರದ ನಿಲುವೇನು?
· ಕಾಂಗ್ರೆಸ್ ಸೇರಿದಂತೆ ಇಂಡಿ ಮೈತ್ರಿಕೂಟದ ಪಕ್ಷಗಳು ಜಾತಿಗಣತಿಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ.
· ಕೆಲವು ರಾಜ್ಯಗಳು ನಡೆಸಿದ ಜಾತಿಗಣತಿಯ ಹೆಸರಿನಲ್ಲಿ ನಡೆಸಿದ ಸಾಮಾಜಿಕ-ಆರ್ಥಿಕ ಸಮೀಕ್ಷೆಗಳು ಪಾರದರ್ಶಕವಾಗಿಲ್ಲ







