ರೂ. 84,000 ಲಂಚ ಪಡೆಯುವಾಗ ಎಸಿಬಿ ಬಲೆಗೆ: ಕಣ್ಣೀರಿಟ್ಟ ತೆಲಂಗಾಣ ಅಧಿಕಾರಿ

ಹೈದರಾಬಾದ್: ರೂ. 84,000 ಲಂಚ ಪಡೆಯುತ್ತಿದ್ದ ತೆಲಂಗಾಣ ಆದಿವಾಸಿ ಕಲ್ಯಾಣ ಅಭಿಯಂತರ ವಿಭಾಗದ ಕಾರ್ಯಪಾಲಕ ಅಭಿಯಂತರರೊಬ್ಬರು ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಬಲೆಗೆ ಬಿದ್ದಿದ್ದು, ಅವರನ್ನು ಬಂಧಿಸಲಾಗಿದೆ.
ಅಧಿಕೃತ ನೆರವು ಒದಗಿಸಲು ಕೆ. ಜಗಜ್ಯೋತಿ ಎಂಬ ಅಧಿಕಾರಿಯು ತಮ್ಮಿಂದ ಲಂಚ ಕೇಳಿದ್ದಾರೆ ಎಂದು ವ್ಯಕ್ತಿಯೊಬ್ಬರು ನೀಡಿದ್ದ ದೂರನ್ನು ಆಧರಿಸಿ ಈ ಬಂಧನ ನಡೆದಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ ಹೇಳಿದೆ. ದೂರು ಸ್ವೀಕರಿಸುತ್ತಿದ್ದಂತೆಯೆ ತ್ವರಿತ ಕಾರ್ಯಾಚರಣೆ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳವು, ನಿರ್ದಿಷ್ಟ ಮೊತ್ತದ ಲಂಚವನ್ನು ಸ್ವೀಕರಿಸುತ್ತಿದ್ದ ಜಗಜ್ಯೋತಿ ಅವರನ್ನು ಬಂಧಿಸಿದೆ.
ನಂತರ ಜಗಜ್ಯೋತಿ ಅಳುತ್ತಿರುವ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕೆ.ಜಗಜ್ಯೋತಿ ಅವರನ್ನು ಫಿನಾಲ್ಪಥಲೀನ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ ಬಲಗೈ ಬೆರಳುಗಳು ಸಕರಾತ್ಮಕ ಫಲಿತಾಂಶವನ್ನು ತೋರಿಸಿವೆ. ಈ ಪರೀಕ್ಷೆಯಲ್ಲಿ ಲಂಚದ ಮೊತ್ತಕ್ಕೆ ರಾಸಾಯನಿಕ ಪುಡಿಯನ್ನು ಲೇಪಿಸಲಾಗಿರುತ್ತದೆ. ಆ ಮೊತ್ತವನ್ನು ಸ್ಪರ್ಶಿಸಿದ ವ್ಯಕ್ತಿಯ ಬೆರಳುಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ.
ಅಕ್ರಮ ಲಾಭ ಪಡೆಯಲು ಜಗಜ್ಯೋತಿ ತಮ್ಮ ಕರ್ತವ್ಯವನ್ನು ಅಸಮರ್ಪಕ ಹಾಗೂ ಅಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ದಳ ಆರೋಪಿಸಿದೆ.
ಜಗಜ್ಯೋತಿಯನ್ನು ಬಂಧಿಸಿದ ನಂತರ, ಅವರಿಂದ ರೂ. 84,000 ಲಂಚದ ಮೊತ್ತವನ್ನು ವಶಪಡಿಸಿಕೊಂಡಿರುವ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು, ಅವರನ್ನು ತಮ್ಮ ವಶಕ್ಕೆ ಪಡೆದಿದ್ದು, ಹೈದರಾಬಾದ್ ನ್ಯಾಯಾಲಯವೊಂದರ ಮುಂದೆ ಹಾಜರು ಪಡಿಸಲಿದ್ದಾರೆ.







