ತ್ವಿಶಾ ಶರ್ಮಾ ಸಾವು ಪ್ರಕರಣ | ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಬೆನ್ನಲ್ಲೇ ಅತ್ತೆ ಗಿರಿಬಾಲ ಸಿಂಗ್ ಬಂಧಿಸಿದ ಸಿಬಿಐ

(File photo: ANI)
ಭೋಪಾಲ್, ಮೇ 28: ರೂಪದರ್ಶಿ ಹಾಗೂ ನಟಿ ತ್ವಿಶಾ ಶರ್ಮಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಅತ್ತೆ ಗಿರಿಬಾಲ ಸಿಂಗ್ ಅವರನ್ನು ಸಿಬಿಐ ಗುರುವಾರ ಬಂಧಿಸಿದೆ.
ಈ ಪ್ರಕರಣದಲ್ಲಿ ಗಿರಿಬಾಲ ಸಿಂಗ್ ಅವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದುಗೊಳಿಸಿದ ಕೆಲವೇ ಗಂಟೆಗಳಲ್ಲಿ ಸಿಬಿಐ ಬಂಧನ ಕ್ರಮ ಕೈಗೊಂಡಿದೆ.
33 ವರ್ಷದ ತ್ವಿಶಾ ಶರ್ಮಾ ಅವರು ಮೇ 12ರಂದು ಭೋಪಾಲ್ನಲ್ಲಿರುವ ತಮ್ಮ ಪತಿಯ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣದ ತನಿಖೆಯನ್ನು ಈ ವಾರದ ಆರಂಭದಲ್ಲಿ ಸಿಬಿಐ ವಹಿಸಿಕೊಂಡಿದ್ದು, ಬಳಿಕ ತನಿಖೆಯನ್ನು ಚುರುಕುಗೊಳಿಸಿದೆ.
ಗುರುವಾರ ಬೆಳಿಗ್ಗೆ ಸುಮಾರು 10.30ರ ವೇಳೆಗೆ ಗಿರಿಬಾಲ ಸಿಂಗ್ ಅವರ ಮನೆಗೆ ತೆರಳಿದ ಮೂವರು ಸದಸ್ಯರ ಸಿಬಿಐ ತಂಡ, ಅವರನ್ನು ವಿಚಾರಣೆಗೊಳಪಡಿಸಿತು. ಈ ವೇಳೆ ಮನೆಯ ಡಿಜಿಟಲ್ ಮ್ಯಾಪಿಂಗ್ ಕಾರ್ಯವನ್ನೂ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ತನಿಖೆಗಾಗಿ ಭೋಪಾಲ್ ನಲ್ಲಿ ತಾತ್ಕಾಲಿಕ ತನಿಖಾ ಕಚೇರಿ ತೆರೆಯಲು ಸಿಬಿಐ ಮುಂದಾಗಿದೆ. ಇದಕ್ಕಾಗಿ ಕಚೇರಿಗೆ ಅಗತ್ಯ ಸ್ಥಳ ಒದಗಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ. ತನಿಖೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳನ್ನು ಸುರಕ್ಷಿತವಾಗಿ ಇಡಲು ಅಗತ್ಯ ಸೌಲಭ್ಯ ಕಲ್ಪಿಸುವಂತೆಯೂ ಮನವಿ ಮಾಡಿದೆ.






