2019–2024ರ ನಡುವೆ 1.8 ಲಕ್ಷಕ್ಕೂ ಅಧಿಕ ಪಾದಚಾರಿಗಳು ರಸ್ತೆ ಅವಘಡಗಳಲ್ಲಿ ಮೃತ್ಯು: ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಜೂ.20: ದೇಶಾದ್ಯಂತ 2019ರಿಂದ 2024ರ ನಡುವೆ ಸಂಭವಿಸಿದ ರಸ್ತೆ ಅವಘಡಗಳಲ್ಲಿ 1.8 ಲಕ್ಷಕ್ಕೂ ಅಧಿಕ ಪಾದಚಾರಿಗಳು ಮೃತಪಟ್ಟಿರುವುದಾಗಿ ಕೇಂದ್ರ ಸರ್ಕಾರದ ಅಂಕಿಅಂಶಗಳು ಬಹಿರಂಗಪಡಿಸಿವೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 2024ರಲ್ಲಿ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಈ ಅವಧಿಯಲ್ಲಿ ಸಾವನ್ನಪ್ಪಿದ ಪಾದಚಾರಿಗಳಲ್ಲಿ ಸುಮಾರು ಶೇ.54ರಷ್ಟು, ಅಂದರೆ 19,680 ಮಂದಿ ಕಾರುಗಳು ಹಾಗೂ ದ್ವಿಚಕ್ರ ವಾಹನಗಳಿಂದ ಸಂಭವಿಸಿದ ಅಪಘಾತಗಳಿಗೆ ಬಲಿಯಾಗಿದ್ದಾರೆ.
ದ್ವಿಚಕ್ರ ವಾಹನ ಸವಾರರ ನಂತರ ರಸ್ತೆ ಅವಘಡಗಳಿಗೆ ಹೆಚ್ಚು ಒಳಗಾಗುವ ಎರಡನೇ ಅತಿ ದೊಡ್ಡ ಸಮೂಹ ಪಾದಚಾರಿಗಳದ್ದಾಗಿದೆ. 2019ರಿಂದ 2024ರ ಅವಧಿಯಲ್ಲಿ ದೇಶಾದ್ಯಂತ 36,526 ದ್ವಿಚಕ್ರ ವಾಹನ ಸವಾರರು ರಸ್ತೆ ಅವಘಡಗಳಲ್ಲಿ ಮೃತಪಟ್ಟಿದ್ದಾರೆ.
ಭಾರತದಲ್ಲಿ ರಸ್ತೆ ಅವಘಡಗಳಲ್ಲಿ ಸಾವನ್ನಪ್ಪುವವರಲ್ಲಿ ಶೇ.46.2ರಷ್ಟು ಮಂದಿ ದ್ವಿಚಕ್ರ ವಾಹನ ಸವಾರರಾಗಿದ್ದರೆ, ಶೇ.20.6ರಷ್ಟು ಮಂದಿ ಪಾದಚಾರಿಗಳಾಗಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ.
ರಾಜ್ಯಗಳ ಪೈಕಿ ತಮಿಳುನಾಡಿನಲ್ಲಿ 4,712 ಪಾದಚಾರಿಗಳು ಮೃತಪಟ್ಟಿದ್ದು, ಇದು ದೇಶದಲ್ಲೇ ಅತಿ ಹೆಚ್ಚು. ನಂತರದ ಸ್ಥಾನಗಳಲ್ಲಿ ಬಿಹಾರ (4,149), ಮಹಾರಾಷ್ಟ್ರ (3,344) ಮತ್ತು ಪಶ್ಚಿಮ ಬಂಗಾಳ (3,241) ರಾಜ್ಯಗಳಿವೆ ಎಂದು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ.
ಈ ಸಂಬಂಧ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ, ನಡೆದಾಡುವ ಹಕ್ಕು ಸಂವಿಧಾನದ ಮೂರನೇ ಭಾಗದಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕು ಎಂದು ಹೇಳಿದೆ. ಸಂವಿಧಾನದ 19(1)(ಡಿ), 19(1)(ಎ), 19(1)(ಸಿ) ಹಾಗೂ 21ನೇ ವಿಧಿಗಳು ಈ ಹಕ್ಕಿಗೆ ರಕ್ಷಣೆ ಒದಗಿಸುತ್ತವೆ ಎಂದು ನ್ಯಾಯಾಲಯ ತಿಳಿಸಿದೆ.
ಪ್ರಜೆಗಳ ನಡೆದಾಡುವ ಹಕ್ಕನ್ನು ಮೋಟಾರು ವಾಹನಗಳು ಅತಿಕ್ರಮಿಸಿಕೊಂಡಿವೆ. ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿದೆಯೆಂದರೆ, ಜನರು ರಸ್ತೆಯಲ್ಲಿ ನಡೆದಾಡುವುದನ್ನೇ ತಮ್ಮ ಸಂಚಾರಕ್ಕೆ ತೊಂದರೆ ಎಂದು ವಾಹನ ಚಾಲಕರು ಭಾವಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.






