ಜರ್ಮನಿಯಿಂದ ಪಿ-75ಐ ಜಲಾಂತರ್ಗಾಮಿ ನೌಕೆ ಖರೀದಿಗೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್

ಸಾಂದರ್ಭಿಕ ಚಿತ್ರ | indiatoday
ಹೊಸ ದಿಲ್ಲಿ: ಭಾರತದ ಮಹತ್ವಾಕಾಂಕ್ಷಿ ಪಿ-75ಐ ಯೋಜನೆಯ ಭಾಗವಾಗಿ ಜರ್ಮನಿಯಿಂದ ಆರು ಸುಧಾರಿತ ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಲು ಮೆಝಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ (MDL) ನೊಂದಿಗೆ ಅಧಿಕೃತ ಮಾತುಕತೆಗಳನ್ನು ಪ್ರಾರಂಭಿಸಲು ರಕ್ಷಣಾ ಸಚಿವಾಲಯಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ.
ಹಿರಿಯ ರಕ್ಷಣಾಧಿಕಾರಿಗಳ ಪ್ರಕಾರ, ಭಾರತದ ಜಲಾಂತರ್ಗಾಮಿ ನೌಕಾ ಪಡೆಗಾಗಿ ದೀರ್ಘಗಾಮಿ ನೀಲನಕ್ಷೆಯನ್ನು ತಯಾರಿಸಲು ಉನ್ನತ ರಕ್ಷಣಾ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಭದ್ರತಾ ಅಧಿಕಾರಿಗಳು ಭಾಗಿಯಾಗಿದ್ದ ಉನ್ನತ ಮಟ್ಟದ ಸಭೆಯಲ್ಲಿ ಈ ಮಾತುಕತೆಗೆ ಹಸಿರು ನಿಶಾನೆ ತೋರಿಸಲಾಗಿದೆ. ಈ ಮಾಸಾಂತ್ಯದ ವೇಳೆಗೆ ರಕ್ಷಣಾ ಸಚಿವಾಲಯ, ಎಂಡಿಎಲ್ ಸಂಸ್ಥೆ ಹಾಗೂ ಆಯ್ದ ಜರ್ಮನಿಯ ಪಾಲುದಾರರೊಂದಿಗೆ ಈ ಮಾತುಕತೆ ನಡೆಯುವ ಸಾಧ್ಯತೆ ಇದೆ.
ಪಿ-75ಐ ಯೋಜನೆಯಡಿ ಭಾರತೀಯ ನೌಕಾಪಡೆಯು ಸ್ವತಂತ್ರ ವಾಯು ಉಡಾವಣಾ ವ್ಯವಸ್ಥೆಯನ್ನು ಹೊಂದಿರುವ ಮುಂದಿನ ಪೀಳಿಗೆ ಆರು ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳನ್ನು ಸೇರ್ಪಡೆ ಮಾಡಿಕೊಳ್ಳಲು ಉದ್ದೇಶಿಸಿದೆ. ಇದು ನೀರಿನೊಳಗೆ ಉಳಿಯುವ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿದ್ದು, ಆರು ಸುಧಾರಿತ ಜಲಾಂತರ್ಗಾಮಿ ನೌಕೆಗಳು ಸುಮಾರು ಆರು ವಾರಗಳ ಕಾಲ ಉಳಿಯಲು ಅವಕಾಶ ನೀಡುತ್ತದೆ.





