ಇಂಧನ ಕೊರತೆ ಭೀತಿ: ಡೀಸೆಲ್ ಮಾರಾಟಕ್ಕೆ ಗರಿಷ್ಠ ಮಿತಿ ಹೇರಿದ ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ (AI)
ಹೊಸದಿಲ್ಲಿ: ಜಾಗತಿಕ ಪೂರೈಕೆ ವ್ಯತ್ಯಯದ ನಡುವೆ ಸ್ಥಳೀಯವಾಗಿ ಇಂಧನ ಕೊರತೆಯಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಸರಕಾರ ವಾಹನವೊಂದಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಮಾರಾಟದ ಮಿತಿ ಹೇರಿದೆ. ಅಲ್ಲದೆ, ಕೈಗಾರಿಕೆ, ವಾಣಿಜ್ಯ ಮತ್ತು ಸಾಂಸ್ಥಿಕ ಬಳಕೆದಾರರು ಪೆಟ್ರೋಲ್ ಪಂಪ್ಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುವುದನ್ನು ನಿರ್ಬಂಧಿಸಿದೆ ಎಂದು ಅಧಿಕೃತ ಆದೇಶ ತಿಳಿಸಿದೆ.
ಚಿಲ್ಲರೆ ಮಾರಾಟ ಮಳಿಗೆಗಳು (ಪೆಟ್ರೋಲ್ ಪಂಪ್) ಡೀಸೆಲ್ ಅನ್ನು ಕೇವಲ ವಾಹನದ ಇಂಧನ ಟ್ಯಾಂಕ್ಗೆ ಅಥವಾ ಇಂಧನ ಸುರಕ್ಷತಾ ಸಂಸ್ಥೆ (ಪಿಎಸ್ಒ) ಅನುಮೋದಿಸಿದ ಕಂಟೈನರ್ಗಳಿಗೆ ಮಾತ್ರ ತುಂಬಿಸಬೇಕು. ಇದು ಪ್ರತಿ ಗ್ರಾಹಕರಿಗೆ ಅಥವಾ ವಾಹನಕ್ಕೆ ದಿನಕ್ಕೆ 200 ಲೀಟರ್ಗಿಂದ ಹೆಚ್ಚಿರಬಾರದು ಎಂದು ಅದು ಹೇಳಿದೆ.
ಅಲ್ಲದೆ, ಕೈಗಾರಿಕೆ, ವಾಣಿಜ್ಯ ಮತ್ತು ಸಾಂಸ್ಥಿಕ ಗ್ರಾಹಕರು ಇನ್ನು ಮುಂದೆ ಚಿಲ್ಲರೆ ಮಾರಾಟ ಮಳಿಗೆಗಳಿಂದ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸಲು ಅನುಮತಿಸಲಾಗುವುದಿಲ್ಲ. ಅವರು ತಮ್ಮ ಇಂಧನವನ್ನು ತಮ್ಮದೇ ಆದ ಗ್ರಾಹಕ ಪಂಪ್ಗಳಿಂದ ಪಡೆದುಕೊಳ್ಳಬೇಕು.
ಗರಿಷ್ಠ 90 ದಿನಗಳ ವರೆಗೆ ಜಾರಿಯಲ್ಲಿರುವ ಈ ನಿರ್ಬಂಧಗಳು ಕೆಲವು ಪ್ರದೇಶಗಳಲ್ಲಿ ಕಂಡು ಬಂದ ಅಸಹಜ ಬೇಡಿಕೆಯ ಬೆಳವಣಿಗೆಯ ಬೆನ್ನಲ್ಲಿ ಜಾರಿಗೊಳಿಸಲಾಗಿದೆ. ಸಗಟು ಬಳಕೆದಾರರು ಮತ್ತು ಚಿಲ್ಲರೆ ಮಾರಾಟ ದರಗಳ ನಡುವಿನ ಬೆಲೆ ವ್ಯತ್ಯಾಸದಿಂದಾಗಿ ಪೆಟ್ರೋಲ್ ಬಂಕ್ಗಳಿಂದ ಇಂಧನ ಖರೀದಿಸಲು ಪ್ರಾರಂಭಿಸಿದ ನಂತರ ಈ ಪರಿಸ್ಥಿತಿ ನಿರ್ಮಾಣವಾಗಿತ್ತು.
ದಿಲ್ಲಿಯಲ್ಲಿ ಪೆಟ್ರೋಲ್ ಪಂಪ್ಗಳಲ್ಲಿ ಡೀಸೆಲ್ ಬೆಲೆ ಲೀಟರ್ಗೆ 95.20 ರೂ. ಆಗಿದ್ದರೆ, ಸಗಟು ಮಾರಾಟದ ಬೆಲೆ 134.50 ರೂ. ಆಗಿದೆ.
ಫೆಬ್ರವರಿ ಕೊನೆಯಲ್ಲಿ ಉಂಟಾದ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಂತರದ ಇಂಧನ ವೆಚ್ಚದ ಏರಿಕೆಯಿಂದ ಸಾಮಾನ್ಯ ಬಳಕೆದಾರರನ್ನು ರಕ್ಷಿಸಲು ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಚಿಲ್ಲರೆ ಬೆಲೆಗಳನ್ನು ನಿಯಂತ್ರಿಸಿದ್ದರಿಂದ ಈ ವ್ಯತ್ಯಾಸ ಉಂಟಾಯಿತು.
ಫೆಬ್ರವರಿ ಕೊನೆಯಲ್ಲಿ ಉಂಟಾದ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಂತರ ಜಾಗತಿಕವಾಗಿ ತೈಲ ಬೆಲೆ ತೀವ್ರವಾಗಿ ಏರಿಕೆಯಾಗಿತ್ತು. ಆದರೆ, ಸಾಮಾನ್ಯ ಬಳಕೆದಾರರಿಗೆ ತೊಂದರೆಯಾಗದಂತೆ ರಕ್ಷಿಸಲು ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಚಿಲ್ಲರೆ ದರಗಳನ್ನು ನಿಯಂತ್ರಣದಲ್ಲಿಟ್ಟಿದ್ದವು. ಇದರಿಂದಾಗಿ ಈ ಬೆಲೆ ವ್ಯತ್ಯಾಸ ಉಂಟಾಗಿತ್ತು. ಟೆಲಿಕಾಂ ಟವರ್ಗಳು ಮತ್ತು ವಿದ್ಯುತ್ ಉತ್ಪಾದನೆಗೆ ಡೀಸೆಲ್ ಬಳಸುವ ಕೈಗಾರಿಕೆಗಳಂತಹ ಸಗಟು ಬಳಕೆದಾರರಿಗೆ ಮಾರುಕಟ್ಟೆ ದರವನ್ನು ವಿಧಿಸಲಾಗುತ್ತಿದ್ದರೆ, ಚಿಲ್ಲರೆ ಪಂಪ್ಗಳ ದರಗಳು ಅಸಲಿ ವೆಚ್ಚಕ್ಕಿಂತ ತೀರಾ ಕಡಿಮೆಯಾಗಿವೆ.
ಟ್ರಕ್ಕಿಂಗ್ ಕಂಪೆನಿಗಳು ಮತ್ತು ರಾಜ್ಯ ರಸ್ತೆ ಸಾರಿಗೆ ಬಸ್ಗಳಂತಹ ವಾಣಿಜ್ಯ ಗ್ರಾಹಕರು ಕೂಡ ಅಗತ್ಯಗಳಿಗಾಗಿ ಚಿಲ್ಲರೆ ಪಂಪ್ಗಳನ್ನು ಅವಲಂಬಿಸಲು ಪ್ರಾರಂಭಿಸಿದ್ದರು. ಇದರಿಂದಾಗಿ ಕೆಲವು ಸ್ಥಳಗಳಲ್ಲಿ ಬೇಡಿಕೆ ಅಸಹಜವಾಗಿ ಹೆಚ್ಚಾಗಿತ್ತು.






