ಕೇಂದ್ರ ಸರಕಾರ ಮನಮೋಹನ್ ಸಿಂಗ್ ಅವರಿಗೆ ಗೌರವ ತೋರಿಸಬೇಕಿತ್ತು: ರಾಹುಲ್ ಗಾಂಧಿ

ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯ ಸಂಸ್ಕಾರವನ್ನು ಅವರ ಸ್ಮಾರಕ ನಿರ್ಮಾಣ ಮಾಡಲು ಗೊತ್ತುಪಡಿಸಲಾದ ಸ್ಥಳದಲ್ಲಿ ನಡೆಸಬೇಕೆಂಬ ಪಕ್ಷದ ಮನವಿಯನ್ನು ತಿರಸ್ಕರಿಸುವ ಮೂಲಕ ಕೇಂದ್ರ ಸರಕಾರ ಮಾಜಿ ಪ್ರಧಾನಿಗೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ.
ಭಾರತ ಮಾತೆಯ ಶ್ರೇಷ್ಠ ಪುತ್ರ ಹಾಗೂ ಸಿಕ್ಖ್ ಸಮುದಾಯದ ಮೊದಲ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಂತ್ಯ ಸಂಸ್ಕಾರವನ್ನು ನಿಗಮ್ಬೋಧ್ ಘಾಟ್ನಲ್ಲಿ ಇಂದು ನಡೆಸುವ ಮೂಲಕ ಪ್ರಸಕ್ತ ಸರಕಾರ ಅವರನ್ನು ಸಂಪೂರ್ಣವಾಗಿ ಅವಮಾನಿಸಿದೆ ಎಂದು ಅಂತ್ಯಕ್ರಿಯ ಮುಗಿದ ಗಂಟೆಗಳ ಬಳಿಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇಲ್ಲಿವರೆಗೆ ಎಲ್ಲಾ ಮಾಜಿ ಪ್ರಧಾನಿಗಳಿಗೆ ಗೌರವ ನೀಡಿ, ಅವರ ಅಂತ್ಯ ಕ್ರಿಯೆಯನ್ನು ಅಧಿಕೃತ ಸಮಾಧಿ ಸ್ಥಳದಲ್ಲಿ ನಡೆಸಲಾಯಿತು. ಇದರಿಂದ ಇದರಿಂದ ಪ್ರತಿಯೊಬ್ಬ ವ್ಯಕ್ತಿ ಕೂಡ ಯಾವುದೇ ಅನಾನುಕೂಲತೆ ಇಲ್ಲದೆ ಅಂತಿಮ ದರ್ಶನ ಪಡೆಯಬಹುದು ಹಾಗೂ ಗೌರವ ಸಲ್ಲಿಸಬಹುದು. ಮನಮೋಹನ್ ಸಿಂಗ್ ಅವರು ನಮ್ಮ ಅತ್ಯುನ್ನತ ಗೌರವ ಹಾಗೂ ಸ್ಮಾರಕಕ್ಕೆ ಅರ್ಹರಾಗಿದ್ದಾರೆ. ದೇಶದ ಈ ಮಹಾನ್ ಪುತ್ರನಿಗೆ ಹಾಗೂ ಅವರ ಹೆಮ್ಮೆಯ ಸಮುದಾಯಕ್ಕೆ ಸರಕಾರ ಗೌರವ ತೋರಿಸಬೇಕಾಗಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ವಿಷಯದಲ್ಲಿ ಕೇಂದ್ರ ಸರಕಾರ ರಾಜಕೀಯ ಹಾಗೂ ಸಂಕುಚಿತ ಮನೋಭಾವನೆಯನ್ನು ಬಿಟ್ಟು ಯೋಚಿಸಬೇಕಿತ್ತು ಎಂದು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
‘ಎಕ್ಸ್’ನಲ್ಲಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಮನಮೋಹನ್ ಸಿಂಗ್ ಅವರ ಅಂತ್ಯ ಸಂಸ್ಕಾರಕ್ಕೆ ಸೂಕ್ತ ಸ್ಥಳವನ್ನು ಒದಗಿಸದೆ ಮಾಜಿ ಪ್ರಧಾನಿ ಹುದ್ದೆಯ ಘನತೆಗೆ ಕೇಂದ್ರ ಸರಕಾರ ನ್ಯಾಯ ಒದಗಿಸಿಲ್ಲ ಎಂದು ಆರೋಪಿಸಿದ್ದಾರೆ.







