ಕೇಂದ್ರ ಸರಕಾರ ಮುಸ್ಲಿಮರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳುತ್ತಿದೆ: ಅಸದುದ್ದೀನ್ ಉವೈಸಿ ಅಸಮಾಧಾನ

ಅಸದುದ್ದೀನ್ ಉವೈಸಿ | PC : PTI
ಹೊಸದಿಲ್ಲಿ: ಕೇಂದ್ರ ಸರಕಾರ ಮುಸ್ಲಿಂ ಸಮುದಾಯವನ್ನು ನಡೆಸಿಕೊಳ್ಳುತ್ತಿರುವ ಕುರಿತು ಲೋಕಸಭಾ ಸಂಸದ ಹಾಗೂ ಎಐಎಂಐಎಂನ ಮುಖ್ಯಸ್ಥ ಅಸದುದ್ದೀನ್ ಉವೈಸಿ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಕುರಿತ ಚರ್ಚೆಯ ಸಂದರ್ಭ ಉವೈಸಿ, ಒಳಗೊಳ್ಳುವ ಹಾಗೂ ಸಮಾನತೆಯ ವಿಧಾನದ ಬಗ್ಗೆ ಸರಕಾರವನ್ನು ಟೀಕಿಸಿದರು. ಅಲ್ಲದೆ, ಕೇಂದ್ರ ಸರಕಾರ ಮುಸ್ಲಿಮರನ್ನು ಅಸ್ಪಶ್ಯರಂತೆ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
‘‘ಬಜೆಟ್ ಭಾಷಣದ ಸಂದರ್ಭ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಲ್ಕು ಸಮುದಾಯಗಳನ್ನು ಉಲ್ಲೇಖಿಸಿದ್ದಾರೆ. ಆದರೆ, ಈ ದೇಶದ 17 ಕೋಟಿ ಮುಸ್ಲಿಮರಲ್ಲಿ ಬಡವರು, ಯುವ ಜನರು, ರೈತರು ಅಥವಾ ಮಹಿಳೆಯರು ಇಲ್ಲವೇ ?’’ ಎಂದು ನಾನು ಕೇಳಲು ಬಯಸುತ್ತೇನೆ ಎಂದು ಉವೈಸಿ ಹೇಳಿದರು.
ತನ್ನ ಪ್ರತಿಪಾದನೆಯನ್ನು ಸಮರ್ಥಿಸಿಕೊಳ್ಳಲು ದತ್ತಾಂಶ ಹಂಚಿಕೊಂಡ ಉವೈಸಿ, 15 ಹಾಗೂ 24 ವರ್ಷಗಳ ನಡುವೆ ಶಿಕ್ಷಣ ಪಡೆದುಕೊಳ್ಳುವವರಲ್ಲಿ ಪರಿಶಿಷ್ಟ ಜಾತಿ ಶೇ. 44, ಹಿಂದೂ ಇತರ ಹಿಂದುಳಿದ ವರ್ಗ ಶೇ. 51 ಹಾಗೂ ಹಿಂದೂ ಮೇಲ್ಜಾತಿ ಶೇ. 59ಕ್ಕೆ ಹೋಲಿಸಿದರೆ ಮುಸ್ಲಿಮರು ಕೇವಲ ಶೇ. 29 ಮಾತ್ರ ಇದ್ದಾರೆ ಎಂದರು.
ಉನ್ನತ ಶಿಕ್ಷಣದಲ್ಲಿ ಮುಸ್ಲಿಮರ ದಾಖಲಾತಿ ಕೇವಲ ಶೇ. 5 ಎಂದು ಅವರು 2018-19ರಿಂದ 2022-23ರ ವರೆಗಿನ ಆವರ್ತಕ ಕಾರ್ಮಿಕ ಪಡೆಯ ಸಮೀಕ್ಷೆ (ಪಿಎಲ್ಎಫ್ಎಸ್)ಯನ್ನು ಉಲ್ಲೇಖಿಸಿ ಹೇಳಿದರು.
ಮುಸ್ಲಿಮರ ‘‘ಆರ್ಥಿಕ ಹೋರಾಟ’’ದ ಮೇಲೆ ಬೆಳಕು ಚೆಲ್ಲಿದ ಉವೈಸಿ, ಮುಸ್ಲಿಮರಲ್ಲಿ ಶೇ. 58 ಸ್ವಉದ್ಯೋಗಿಗಳು, ನಿಯಮಿತ ವೇತನ ಪಡೆದುಕೊಳ್ಳುವ ಉದ್ಯೋಗಿಗಳು ಕೇವಲ ಶೇ. 15., ಅನಿಯಮಿತ ಉದ್ಯೋಗಿಗಳು ಶೇ. 26 ಎಂದರು.
ಮುಸ್ಲಿಮರಿಗೆ ಉದ್ಯೋಗ ಅಥವಾ ಶಿಕ್ಷಣದ ಅವಕಾಶ ಸಿಗುತ್ತಿಲ್ಲ. ಸರಕಾರ ಮುಸ್ಲಿಮರನ್ನು ಅಸ್ಪಶ್ಯರು ಎಂದು ಪರಿಗಣಿಸಿದೆ. ಅವರಿಗೆ ರಾಜಕೀಯ ಪ್ರತಿನಿಧಿಕರಣ ಹಾಗೂ ದೇಶದ ಪ್ರಗತಿಯ ಪಾಲನ್ನು ನಿರಾಕರಿಸಿದೆ ಎಂದು ಅವರು ಹೇಳಿದರು.
ಸರಕಾರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಬಜೆಟ್ ಅನ್ನು 5 ಸಾವಿರ ಕೋಟಿ ರೂ.ಗಳಿಂದ 3 ಸಾವಿರ ಕೋಟಿ ರೂ.ಗಳಿಗೆ ಇಳಿಕೆ ಮಾಡಿರುವುದನ್ನು ಉವೈಸಿ ಖಂಡಿಸಿದ್ದಾರೆ.







