ವಾರ್ಷಿಕ, ಜೀವಿತಾವಧಿ ಟೋಲ್ ಪಾಸ್ ಗಳಿಗೆ ಕೇಂದ್ರ ಚಿಂತನೆ

ಸಾಂದರ್ಭಿಕ ಚಿತ್ರ PC: x.com/BharatTechIND
ಹೊಸದಿಲ್ಲಿ: ಎಲ್ಲವೂ ಯೋಜನೆಯಂತೆ ನಡೆದರೆ ಭಾರತೀಯ ಹೆದ್ದಾರಿಗಳಲ್ಲಿ ವಾಹನ ಚಾಲಕರಿಗೆ ಸುಲಲಿತ ಹಾಗೂ ತಡೆರಹಿತ ಚಾಲನೆ ಸದ್ಯದಲ್ಲೇ ಸಾಧ್ಯವಾಗಲಿದೆ. ನಿಯತವಾಗಿ ಪ್ರಯಾಣ ಮಾಡುವವರಿಗೆ ಅನುಕೂಲಕರ ಮತ್ತು ಮಿತ ವೆಚ್ಚದಾಯಕ ಎನಿಸಿದ ವಾರ್ಷಿಕ ಹಾಗೂ ಜೀವಿತಾವಧಿ ಟೋಲ್ ಪಾಸ್ ಗಳನ್ನು ಆರಂಭಿಸುವ ಬಗ್ಗೆ ಕೇಂದ್ರ ಚಿಂತನೆ ನಡೆಸಿದೆ.
ಟೋಲ್ ಪ್ಲಾಝಾಗಳಲ್ಲಿ ವಾಹದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಹಾಲಿ ಇರುವ ಸುಂಕ ಪಾವತಿ ವ್ಯವಸ್ಥೆಗೆ ಪರ್ಯಾಯವಾಗಿ ಕೈಗೆಟುಕುವ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವುದು ಕೇಂದ್ರದ ಉದ್ದೇಶವಾಗಿದೆ.
ಖಾಸಗಿ ವಾಹನಗಳ ಮಾಲೀಕರಿಗೆ ಹೆಚ್ಚು ಜೇಬು-ಸ್ನೇಹಿ ಅನುಭವವನ್ನು ಒದಗಿಸುವುದು ವಾರ್ಷಿಕ ಹಾಗೂ ಜೀವಿತಾವಧಿ ಟೋಲ್ ಪಾಸ್ ಗಳನ್ನು ಪರಿಚಯಿಸುವ ಹಿಂದಿನ ಮುಖ್ಯ ಉದ್ದೇಶವಾಗಿದೆ. ಇಡೀ ಪ್ರಕ್ರಿಯೆಯನ್ನು ಸರಳಗೊಳಿಸುವುದು ಮತ್ತು ಪದೇ ಪದೇ ಟೋಲ್ ಬೂತ್ ಗಳಲ್ಲಿ ವಾಹನ ನಿಲ್ಲಿಸುವ ಅಗತ್ಯತೆಯನ್ನು ಈ ಪರ್ಯಾಯ ಕ್ರಮ ನಿವಾರಿಸಲಿದೆ. ಇದರಿಂದ ಹೆದ್ದಾರಿ ಪ್ರಯಾಣ ಹೆಚ್ಚು ದಕ್ಷ ಮತ್ತು ಸಮಯ ಉಳಿಸುವ ಕ್ರಮವಾಗಲಿದೆ. ಯಶಸ್ವಿಯಾಗಿ ಅನುಷ್ಠಾನಗೊಂಡಲ್ಲಿ, ಇದು ಭಾರತದಲ್ಲಿ ಸುಲಲಿತ ಹಾಗೂ ವೇಗದ ಪ್ರಯಾಣವನ್ನು ವಾಹನ ಮಾಲೀಕರಿಗೆ ನೀಡಿದರೆ, ಸರ್ಕಾರದ ಪಾಲಿಗೆ ಟೋಲ್ ಸಂಗ್ರಹ ಕೂಡಾ ಗಣನೀಯವಾಗಿ ಹೆಚ್ಚಲಿದೆ.
ಇದಲ್ಲದೇ, ಈ ವ್ಯವಸ್ಥೆಯು ಸುಸ್ಥಿರ ಹಾಗೂ ನಿರಂತರ ಆದಾಯದ ಹರಿವನ್ನು ಖಾತರಿಪಡಿಸುವುದರಿಂದ ಇದನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ದೇಶದ ರಸ್ತೆ ಮೂಲಸೌಕರ್ಯಗಳ ನಿರ್ವಹಣೆಗೆ ಮರು ಹೂಡಿಕೆ ಮಾಡಬಹುದಾಗಿದೆ. ಇದು ಧೀರ್ಘಾವಧಿ ಪ್ರಗತಿ ಮತ್ತು ಸುಧಾರಣೆಗೆ ಪೂರಕವಾಗಲಿದೆ.
ಈ ಪ್ರಕ್ರಿಯೆ ಬಗ್ಗೆ ಹೆದ್ದಾರಿ ಸಚಿವಾಲಯದ ಮೂಲಗಳು ವಿವರ ನೀಡಿ, ವಾರ್ಷಿಕ ಟೋಲ್ ಪಾಸ್ ಗಳಿಗೆ ಒಂದೇ ಬಾರಿ 3000 ರೂಪಾಯಿ ಪಾವತಿಗೆ ಅವಕಾಶವಿದೆ. ಈ ಮೊತ್ತ ಪಾವತಿಸಿದಲ್ಲಿ ಆ ವಾಹನ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್ಪ್ರೆಸ್ ಹೈವೇ ಗಳಲ್ಲಿ ಯಾವುದೇ ಮಿತಿ ಇಲ್ಲದೇ ಸಂಚರಿಸಬಹುದಾಗಿದೆ. 15 ವರ್ಷಗಳ ಅವಧಿಗೆ ಮಾನ್ಯತೆ ಹೊಂದಿರುವ ಜೀವಿತಾವಧಿ ಪಾಸ್ ಗೆ 30 ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ. ಇದು ಪದೇ ಪದೇ ಟೋಲ್ ಪಾವತಿ ಮಾಡುವ ಅಗತ್ಯತೆಯನ್ನು ನಿವಾರಿಸುತ್ತದೆ.
ಹಾಲಿ ಇರುವ ಫಾಸ್ಟ್ಯಾಗ್ ವ್ಯವಸ್ಥೆಯಲ್ಲೇ ಹೊಸ ವ್ಯವಸ್ಥೆಯನ್ನು ಸಮನ್ವಯಗೊಳಿಸುವ ಉದ್ದೇಶವಿದ್ದು, ಇದಕ್ಕಾಗಿ ಹೆಚ್ಚುವರಿ ಸಾಧನ ಹಾಗೂ ವೆಚ್ಚ ಮಾಡುವ ಅಗತ್ಯವಿಲ್ಲ.







