Ayodhya Ram Mandir ನಿರ್ಮಾಣದಲ್ಲಿ ನೃಪೇಂದ್ರ ಮಿಶ್ರಾರಿಗೆ ಹೆಚ್ಚಿನ ಅಧಿಕಾರವಿತ್ತು: VHP ನಾಯಕ ಚಂಪತ್ ರಾಯ್ ಆರೋಪ

ಚಂಪತ್ ರಾಯ್ | Photo Credit : PTI
ಹೊಸದಿಲ್ಲಿ: ಅಯೋಧ್ಯೆಯ ರಾಮ ಮಂದಿರ ನಿರ್ಮಾಣದಲ್ಲಿ ನೃಪೇಂದ್ರ ಮಿಶ್ರಾ ಅವರಿಗೆ ಹೆಚ್ಚಿನ ಅಧಿಕಾರವಿತ್ತು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (SRJTKT) ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ VHP ನಾಯಕ ಚಂಪತ್ ರಾಯ್ ಹೇಳಿದ್ದಾರೆ.
ಆಗಸ್ಟ್ 18ರಂದು ಬಿಡುಗಡೆಯಾದ ಒಂಬತ್ತು ಪುಟಗಳ ಹಿಂದಿ ಲೇಖನದಲ್ಲಿ ರಾಯ್ ಈ ಆರೋಪ ಮಾಡಿದ್ದಾರೆ. VHP ಮಾಧ್ಯಮ ಗುಂಪಿನಲ್ಲಿ ಹಂಚಿಕೊಳ್ಳಲಾದ ಲೇಖನದಲ್ಲಿ, ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿದ್ದ ನೃಪೇಂದ್ರ ಮಿಶ್ರಾ ಅವರು ದೇವಾಲಯ ನಿರ್ಮಾಣದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರು ಮತ್ತು ‘ಎಲ್ಲಾ ನಿರ್ಧಾರಗಳಲ್ಲೂ ತಮ್ಮನ್ನು ಪ್ರಮುಖ ಅಧಿಕಾರಿಯೆಂದು ಪರಿಗಣಿಸುತ್ತಿದ್ದರು’ ಎಂದು ರಾಯ್ ಹೇಳಿದ್ದಾರೆ.
ಮಿಶ್ರಾ ಅವರ ಅನುಮೋದನೆಯಿಲ್ಲದೆ ರಾಮ ಮಂದಿರಕ್ಕೆ ಸಂಬಂಧಿಸಿದ ಯಾವುದೇ ಕೆಲಸ ನಡೆಯುತ್ತಿರಲಿಲ್ಲ. ಅವರ ಭಾಗವಹಿಸುವಿಕೆ ಇಲ್ಲದೆ ತೆಗೆದುಕೊಂಡ ನಿರ್ಧಾರಗಳನ್ನು ತಿರಸ್ಕರಿಸಲಾಗುತ್ತಿತ್ತು ಎಂದೂ ಅವರು ಹೇಳಿದ್ದಾರೆ.
ಮಿಶ್ರಾ ಅವರು ತಮ್ಮ ಆಯ್ಕೆಯ ಹಲವರನ್ನು ದೇವಾಲಯ ನಿರ್ಮಾಣ ಸಮಿತಿಗೆ ಕರೆತಂದಿದ್ದರು ಎಂದೂ ರಾಯ್ ಆರೋಪಿಸಿದ್ದಾರೆ. ಅವರಲ್ಲಿ ಒಬ್ಬರು ಹಿಂದಿನ ಆರು ವರ್ಷಗಳಲ್ಲಿ ಒಂದೆರಡು ಬಾರಿ ಮಾತ್ರ ಅಯೋಧ್ಯೆಗೆ ಭೇಟಿ ನೀಡಿದ್ದರು. ಮತ್ತೊಬ್ಬರನ್ನು ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಸಮಾಲೋಚಿಸಲಾಗುತ್ತಿತ್ತು. NBCCಯ ಮಾಜಿ ಅಧ್ಯಕ್ಷ ಅನೂಪ್ ಮಿತ್ತಲ್ ಅವರು ಸಮಿತಿಯ ಸಭೆಗಳಿಗೆ ನಿಯಮಿತವಾಗಿ ಹಾಜರಾಗುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಸಮಿತಿಯ ಸಭೆಗಳು ಸಾಮಾನ್ಯವಾಗಿ ಪ್ರತಿ ತಿಂಗಳು ನಡೆಯುತ್ತಿದ್ದವು. ಕೆಲ ಸಮಯದಲ್ಲಿ 15 ದಿನಗಳಿಗೊಮ್ಮೆ ಸಭೆ ನಡೆಸಲಾಗುತ್ತಿತ್ತು ಎಂದೂ ರಾಯ್ ಹೇಳಿದ್ದಾರೆ.
‘ಸಮಿತಿಯೇ ಪ್ರತಿಯೊಂದು ನಿರ್ಧಾರವನ್ನೂ ತೆಗೆದುಕೊಳ್ಳುತ್ತಿತ್ತು. ಸಮಿತಿಯ ನಿರ್ಧಾರವಿಲ್ಲದೆ ಯಾವುದೇ ಕೆಲಸ ನಡೆಯುತ್ತಿರಲಿಲ್ಲ. ಸಮಿತಿಯ ಹೊರಗೆ ತೆಗೆದುಕೊಂಡ ನಿರ್ಧಾರಗಳನ್ನು ಸ್ವೀಕರಿಸಲಾಗುತ್ತಿರಲಿಲ್ಲ. ಅಂತಹ ನಿರ್ಧಾರದಂತೆ ಕೆಲಸ ನಡೆದಿದ್ದರೆ ಅದನ್ನು ತೆಗೆದುಹಾಕಲಾಗುತ್ತಿತ್ತು. ದೇವಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ನಿರ್ಧಾರಗಳಲ್ಲೂ ನೃಪೇಂದ್ರ ಮಿಶ್ರಾ ತಮ್ಮನ್ನು ಪ್ರಮುಖ ಅಧಿಕಾರಿಯೆಂದು ಪರಿಗಣಿಸುತ್ತಿದ್ದರು’ ಎಂದು ರಾಯ್ ಲೇಖನದಲ್ಲಿ ಬರೆದಿದ್ದಾರೆ.
ನಿರ್ಮಾಣದಲ್ಲಿ ಮಿಶ್ರಾ ಪಾತ್ರ
ರಾಮ ಜನ್ಮಭೂಮಿ ವಿವಾದದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಕೇಂದ್ರ ಸರಕಾರವು 15 ಟ್ರಸ್ಟಿಗಳನ್ನು ಒಳಗೊಂಡ SRJTKT ರಚಿಸಿತು. ದೇವಾಲಯ ನಿರ್ಮಾಣ ಮತ್ತು ಸಂಬಂಧಿತ ಚಟುವಟಿಕೆಗಳ ಮೇಲ್ವಿಚಾರಣೆಗೆ ರಚಿಸಲಾದ ಸಮಿತಿಯ ಅಧ್ಯಕ್ಷರನ್ನಾಗಿ ಮಿಶ್ರಾ ಅವರನ್ನು ನೇಮಿಸಲಾಗಿತ್ತು ಎಂದು ರಾಯ್ ಹೇಳಿದ್ದಾರೆ.
ಮಿಶ್ರಾ ಅವರನ್ನು ನಿರ್ಮಾಣದ ‘ಏಕೈಕ ಉಸ್ತುವಾರಿ’ ಎಂದು ಟೀಕಿಸಿದರೂ, ಯೋಜನೆಯ ಸಂದರ್ಭದಲ್ಲಿ ಎದುರಾದ ಅಡೆತಡೆಗಳನ್ನು ನಿವಾರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ರಾಯ್ ಶ್ಲಾಘಿಸಿದ್ದಾರೆ.
‘ಯಾವುದೇ ಅಡಚಣೆ ಎದುರಾದಾಗ ಅವರು ತಕ್ಷಣವೇ ಭಾರತದ ಸಂಬಂಧಿತ ಕ್ಷೇತ್ರಗಳ ಅತ್ಯಂತ ಸಮರ್ಥ ವ್ಯಕ್ತಿಗಳನ್ನು ಸಂಪರ್ಕಿಸಿ, ಅವರನ್ನು ಅಯೋಧ್ಯೆಗೆ ಕರೆಸುತ್ತಿದ್ದರು’ ಎಂದು ಅವರು ಹೇಳಿದ್ದಾರೆ.
L&T, ಟಾಟಾ ಸಂಸ್ಥೆಗಳ ಆಯ್ಕೆ
ದೇವಾಲಯ ನಿರ್ಮಾಣದ ಸಾಂಸ್ಥಿಕ ಮತ್ತು ಇಂಜಿನಿಯರಿಂಗ್ ವ್ಯವಸ್ಥೆಗಳ ಬಗ್ಗೆಯೂ ಲೇಖನದಲ್ಲಿ ವಿವರಿಸಲಾಗಿದೆ. ಲಾರ್ಸೆನ್ & ಟೂಬ್ರೊವನ್ನು ನಿರ್ಮಾಣ ಸಂಸ್ಥೆಯಾಗಿ ಹಾಗೂ ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್ ಅನ್ನು ಯೋಜನಾ ನಿರ್ವಹಣಾ ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಗಿತ್ತು ಎಂದು ರಾಯ್ ಹೇಳಿದ್ದಾರೆ.
ರಾಮ ಜನ್ಮಭೂಮಿ ಚಳವಳಿಯ ಪ್ರಮುಖ ನಾಯಕ ಹಾಗೂ ದಿವಂಗತ VHP ನಾಯಕ ಅಶೋಕ್ ಸಿಂಘಾಲ್ ಅವರ ದೂರದೃಷ್ಟಿಯ ಬಗ್ಗೆ ಮಿಶ್ರಾ ಅವರಿಗೆ ತಿಳಿಸಲಾಗಿತ್ತು ಎಂದೂ ಅವರು ಹೇಳಿದ್ದಾರೆ.
ಅಹಮದಾಬಾದ್ನ ವಾಸ್ತುಶಿಲ್ಪಿ ಚಂದ್ರಕಾಂತ್ ಭಾಯಿ ಸೋಂಪುರ ಅವರನ್ನು 1986ರಲ್ಲೇ ಅಶೋಕ್ ಸಿಂಘಾಲ್ ಅವರು ರಾಮ ಮಂದಿರದ ವಾಸ್ತುಶಿಲ್ಪಿಯಾಗಿ ಆಯ್ಕೆ ಮಾಡಿದ್ದರು. ಮಂದಿರ ನಿರ್ಮಾಣದ ಸಂದರ್ಭದಲ್ಲಿ ಅವರನ್ನೇ ಮುಂದುವರಿಸಲಾಯಿತು. ಮಂದಿರದ ಹೊರತಾದ ಇತರ ಕಟ್ಟಡಗಳ ವಿನ್ಯಾಸ ಮತ್ತು ನಿರ್ಮಾಣಕ್ಕಾಗಿ, ನೃಪೇಂದ್ರ ಮಿಶ್ರಾ ಅವರು ಜೈ ಕಾಕಡಿಕರ್ ನೇತೃತ್ವದ ನೋಯ್ಡಾ ಮೂಲದ ಡಿಸೈನ್ ಅಸೋಸಿಯೇಟ್ಸ್ ಸಂಸ್ಥೆಯನ್ನು ಆಯ್ಕೆ ಮಾಡಿದರು ಎಂದು ಲೇಖನದಲ್ಲಿ ಹೇಳಲಾಗಿದೆ.
ಚಂಪತ್ ರಾಯ್ ಅವರ ಪ್ರಕಾರ, COVID-19 ಸಾಂಕ್ರಾಮಿಕದ ನಡುವೆಯೇ ಜೂನ್ 2020ರಲ್ಲಿ ದೇವಾಲಯ ನಿರ್ಮಾಣ ಆರಂಭವಾಯಿತು. ಜೂನ್ 2026ರ ವೇಳೆಗೆ ನಿರ್ಮಾಣ ಪೂರ್ಣಗೊಂಡು ಸಮಾಜಕ್ಕೆ ಸಮರ್ಪಿಸಲಾಯಿತು. ಈ ಸಾಧನೆಯಲ್ಲಿ ಮಿಶ್ರಾ ಅವರ ಪ್ರಯತ್ನಗಳು ಪ್ರಮುಖವಾಗಿದ್ದವು ಎಂದು ರಾಯ್ ಹೇಳಿದ್ದಾರೆ.
70 ಎಕರೆ ಪ್ರದೇಶದಲ್ಲಿ ರಾಮ ಮಂದಿರದ ಜತೆಗೆ ಹಲವು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿರುವ ಬಗ್ಗೆಯೂ ಲೇಖನದಲ್ಲಿ ವಿವರಿಸಲಾಗಿದೆ. ದೇವಾಲಯದ ಸುತ್ತಲಿನ ವಿವಿಧ ಕಟ್ಟಡಗಳು, ಇತರ ದೇವಾಲಯಗಳು, ಯಾತ್ರಿಕರ ಸೌಲಭ್ಯಗಳು, ವಸ್ತುಸಂಗ್ರಹಾಲಯ, ಅತಿಥಿಗೃಹ, ಸಭಾಂಗಣ, ಭದ್ರತಾ ಗೋಡೆ ಹಾಗೂ ಇತರ ಮೂಲಸೌಕರ್ಯಗಳು ಇದರಲ್ಲಿ ಸೇರಿವೆ.
ದೇಣಿಗೆ ವಿವಾದದ ಬೆನ್ನಲ್ಲೇ ಲೇಖನ
ರಾಮ ಮಂದಿರಕ್ಕೆ ದೇಣಿಗೆ ದುರುಪಯೋಗಪಡಿಸಿಕೊಂಡ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಿಂದ ಚಂಪತ್ ರಾಯ್ ಅವರಿಗೆ ಕ್ಲೀನ್ ಚಿಟ್ ದೊರೆತಿದೆ ಎಂಬ ವರದಿಗಳ ಕೆಲ ದಿನಗಳ ಬಳಿಕ ಈ ಲೇಖನ ಪ್ರಕಟವಾಗಿದೆ. ದೇಣಿಗೆ ಕಳ್ಳತನದ ಆರೋಪದ ಬಳಿಕ ರಾಯ್ ಜುಲೈನಲ್ಲಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿದಿದ್ದರು.
ಕಾಂಗ್ರೆಸ್ ರಾಜ್ಯಸಭಾ ಸಂಸದ ಹಾಗೂ ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಉಸ್ತುವಾರಿ ಪವನ್ ಖೇರಾ ಅವರು, ದೇಣಿಗೆ ವಿವಾದದ ಸಂದರ್ಭದಲ್ಲಿ ನೃಪೇಂದ್ರ ಮಿಶ್ರಾ ನೀಡಿದ್ದ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣ Xನಲ್ಲಿ ಪ್ರತಿಕ್ರಿಯಿಸಿದ್ದಾರೆ.
ರಾಮ ಮಂದಿರದ ದೇಣಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಮೊದಲು ಕೇಳಿಬಂದಾಗ, ಈ ಆರೋಪಗಳು ಟ್ರಸ್ಟ್ನ ಪ್ರತಿಷ್ಠೆಗೆ ‘ಕಪ್ಪು ಚುಕ್ಕೆ’ ಎಂದು ನೃಪೇಂದ್ರ ಮಿಶ್ರಾ ಹೇಳಿದ್ದರು ಎಂದು ಪವನ್ ಖೇರಾ ಹೇಳಿದ್ದಾರೆ.
ಈ ಕುರಿತು 'The Hindu' ಗೆ ನೀಡಿದ ಸಂದರ್ಶನದಲ್ಲಿ ನೃಪೇಂದ್ರ ಮಿಶ್ರಾ ಅವರು ಟ್ರಸ್ಟ್ಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು (CEO) ನೇಮಿಸುವ ವಿಚಾರವನ್ನು ಪ್ರಸ್ತಾಪಿಸಿದ್ದರು. ಟ್ರಸ್ಟ್ ಖರ್ಚು ಮಾಡುವ ಪ್ರತಿಯೊಂದು ರೂಪಾಯಿಗೂ ಲೆಕ್ಕ ಇರಬೇಕು. ಈ ಹಣ ರಾಮನ ಭಕ್ತರು ನೀಡಿರುವುದರಿಂದ ಅದರ ಬಳಕೆಯ ಬಗ್ಗೆ ಸ್ಪಷ್ಟ ಲೆಕ್ಕ ನೀಡಬೇಕು ಎಂದು ಅವರು ಹೇಳಿದ್ದರು.
ಮಿಶ್ರಾ ಅವರ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿದ ಪವನ್ ಖೇರಾ, ‘ಈಗ ಚಂಪತ್ ರಾಯ್ ಅವರು ರಾಮ ಮಂದಿರ ನಿರ್ಮಾಣದ ನಿರ್ವಹಣೆಗೆ ನೃಪೇಂದ್ರ ಮಿಶ್ರಾ ಅವರನ್ನೇ ಹೊಣೆಗಾರರನ್ನಾಗಿ ಮಾಡಿದ್ದಾರೆ. ಇದು ಇಬ್ಬರ ನಡುವಿನ ಭಿನ್ನಾಭಿಪ್ರಾಯದಂತೆ ಕಾಣಬಹುದು. ಆದರೆ ಇದರ ಹಿಂದೆ ಇನ್ನಷ್ಟು ವಿಚಾರಗಳಿವೆ’ ಎಂದು ಹೇಳಿದ್ದಾರೆ.
‘ನೃಪೇಂದ್ರ ಮಿಶ್ರಾ ಮೋದಿ ಅವರ ವ್ಯಕ್ತಿ. ಚಂಪತ್ ರಾಯ್ RSSನ ವ್ಯಕ್ತಿ. ಆದ್ದರಿಂದ ಇದು ರಾಯ್ ವಿರುದ್ಧ ಮಿಶ್ರಾ ಅಲ್ಲ; ಮೋದಿ ವಿರುದ್ಧ ಮೋಹನ್ (RSS ಮುಖ್ಯಸ್ಥ ಮೋಹನ್ ಭಾಗವತ್) ನಡುವಿನ ಸಂಘರ್ಷ. ಇಬ್ಬರೂ ಹಗರಣದಿಂದ ತಮ್ಮ ಕೈಗಳನ್ನು ತೊಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂದು ಖೇರಾ ಆರೋಪಿಸಿದ್ದಾರೆ.
‘ವಿವಾದಾತ್ಮಕ ಅಂಶವಿಲ್ಲ’
'The Hindu'ಗೆ ನೀಡಿದ ಸಂದರ್ಶನದಲ್ಲಿ ನೃಪೇಂದ್ರ ಮಿಶ್ರಾ ಅವರು, ಚಂಪತ್ ರಾಯ್ ಅವರ ಲೇಖನವನ್ನು ಸಂಪೂರ್ಣವಾಗಿ ಓದಿರುವುದಾಗಿ ತಿಳಿಸಿದ್ದಾರೆ. ಲೇಖನದಲ್ಲಿ ತಮ್ಮ ಬಗ್ಗೆ ಯಾವುದೇ ನಕಾರಾತ್ಮಕ ಅಥವಾ ವಿವಾದಾತ್ಮಕ ಹೇಳಿಕೆ ಇಲ್ಲ ಎಂದು ಅವರು ಹೇಳಿದ್ದಾರೆ.
ಸೌಜನ್ಯ: The Hindu






