Tamil Nadu | ಮರ್ಯಾದೆಗೇಡು ಹತ್ಯೆ ಪ್ರಕರಣ; ಪ್ರೀತಿಸಿದ್ದಕ್ಕೆ ದಲಿತ ಯುವಕನ ಕೊಲೆ, ನಾಲ್ವರ ಬಂಧನ

ಪ್ರವೀಣ್ ಕುಮಾರ್ | Photo Credit : thenewsminute.com
ಚೆನ್ನೈ: ಯುವತಿಯೊಂದಿಗಿನ ಪ್ರೇಮ ಸಂಬಂಧದ ವಿಚಾರವಾಗಿ 23 ವರ್ಷದ ದಲಿತ ಯುವಕನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಕೆಲಂಬಾಕ್ಕಂ ಸಮೀಪ ನಡೆದಿದೆ.
ತೈಯೂರು ನಿವಾಸಿ ಪ್ರವೀಣ್ ಕುಮಾರ್ (23) ಆಗಸ್ಟ್ 16ರ ರಾತ್ರಿ ದಾಳಿಗೆ ಒಳಗಾಗಿದ್ದರು. ತಲೆಗೆ, ಕೈಗಳಿಗೆ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿದ್ದ ಅವರನ್ನು ಮೊದಲು ಕೆಲಂಬಾಕ್ಕಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಚೆನ್ನೈನ ರಾಜೀವ್ ಗಾಂಧಿ ಸರಕಾರಿ ಸಾಮಾನ್ಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಆಗಸ್ಟ್ 20ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪ್ರವೀಣ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಮ್ಮದೇ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಸೇರಿದ ಯುವತಿಯೊಂದಿಗೆ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಯುವತಿಯ ತಂದೆ ಏಳುಮಲೈ ಅವರು ಆಡಳಿತಾರೂಢ TVK ಸದಸ್ಯರಾಗಿದ್ದು, ಈ ಪ್ರೇಮ ಸಂಬಂಧಕ್ಕೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 16ರಂದು ರಾತ್ರಿ ಮನೆಯ ಸಮೀಪ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಪ್ರವೀಣ್ ಅವರನ್ನು ಕಾರಿನಲ್ಲಿ ಬಂದ ಕೆಲವರು ದಾರಿ ಕೇಳುವ ನೆಪದಲ್ಲಿ ಸಮೀಪಿಸಿ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ವ್ಯಕ್ತಿಗಳು ಕಾರಿನಿಂದ ಇಳಿದು ಮಚ್ಚಿನಿಂದ ಹಲ್ಲೆ ನಡೆಸಿದ್ದರು. ಪ್ರವೀಣ್ ಅವರ ಕೂಗು ಕೇಳಿ ಸ್ಥಳೀಯರು ಧಾವಿಸುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದರು.
ಘಟನೆಗೆ ಸಂಬಂಧಿಸಿದಂತೆ ಏಳುಮಲೈ, ಮಣಿಕಂದನ್, ನಂತೀಶ್ ಹಾಗೂ ಗೌತಮ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪ್ರವೀಣ್ ಮೃತಪಟ್ಟ ಬಳಿಕ ಪೊಲೀಸರು ಕೊಲೆ ಯತ್ನ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಬದಲಿಸಿದ್ದಾರೆ.
ಪ್ರವೀಣ್ಗೆ ಈ ಹಿಂದೆ ಹಲವು ಬಾರಿ ಬೆದರಿಕೆ ಹಾಕಲಾಗಿತ್ತು ಎಂದು ನೆರೆಮನೆಯ ಸತೀಶ್ ಕುಮಾರ್ ಆರೋಪಿಸಿದ್ದಾರೆ. ಸುಮಾರು ಆರು ತಿಂಗಳ ಹಿಂದೆ ಏಳುಮಲೈ ಹಾಗೂ ಇತರರು ಪ್ರವೀಣ್ ನನ್ನು ಕಟ್ಟಿ ಹಾಕಿ ಥಳಿಸಿದ್ದರು. ಈ ವೇಳೆ ಪೊಲೀಸರಿಗೆ ದೂರು ನೀಡದಿರಲು ಕುಟುಂಬದವರು ನಿರ್ಧರಿಸಿದ್ದರು ಎಂದೂ ಅವರು ಹೇಳಿದ್ದಾರೆ.
ಪ್ರವೀಣ್ ಹಾಗೂ ಯುವತಿ ಒಂದೇ ಆದಿ ದ್ರಾವಿಡ ಸಮುದಾಯಕ್ಕೆ ಸೇರಿದವರಾಗಿದ್ದರೂ, ಪ್ರವೀಣ್ ಬಡ ಕುಟುಂಬದ ಹಿನ್ನೆಲೆಯಿಂದ ಬಂದಿದ್ದರು ಎಂದು ಸತೀಶ್ ಕುಮಾರ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಜಾತಿಯ ಜತೆಗೆ ವರ್ಗದ ಅಸಮಾನತೆಯೂ ಪ್ರಮುಖ ಕಾರಣವಾಗಿರಬಹುದು ಎಂದು ಜಾತಿವಿರೋಧಿ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ. ಜಾತಿ, ವರ್ಗ, ಧರ್ಮ ಹಾಗೂ ಲಿಂಗ ಅಸ್ಮಿತೆಗಳ ಹಿನ್ನೆಲೆಯಲ್ಲಿ ನಡೆಯುವ ‘ಮರ್ಯಾದೆಗೇಡು ಹತ್ಯೆ’ಗಳನ್ನು ತಡೆಯಲು ವಿಶೇಷ ಕಾನೂನು ಅಗತ್ಯವಿದೆ ಎಂಬ ಒತ್ತಾಯವೂ ಕೇಳಿಬಂದಿದೆ.
ಸೌಜನ್ಯ: thenewsminute.com






