ಛತ್ತೀಸ್ಗಢ: ನಿಗೂಢ ಕಾಯಿಲೆಯಿಂದ 13 ಮಂದಿ ಮೃತ್ಯು

ಚಿಕಿತ್ಸೆ ಪಡೆಯುತ್ತಿರುವ ಧನಿಕೋರ್ತಾ ಗಾಮಸ್ಥರು PC: screengrab/ x.com/satishm
ರಾಯಪುರ: ಛತ್ತೀಸ್ಗಢದ ಗಲಭೆಪೀಡಿತ ಸುಕ್ಮಾ ಜಿಲ್ಲೆಯ ಗುಡ್ಡಗಾಡು ಗ್ರಾಮದಲ್ಲಿ ನಿಗೂಢ ಕಾಯಿಲೆಯಿಂದಾಗಿ ಕಳೆದ ಒಂದು ತಿಂಗಳ ಅವಧಿಯಲ್ಲಿ 13 ಮಂದಿ ಜೀವ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಆದರೆ ಅಧಿಕಾರಿಗಳು ಹೇಳುವಂತೆ ಇತ್ತೀಚಿನ ಐದು ಸಾವಿನ ಪ್ರಕರಣಗಳ ಪೈಕಿ ಎರಡು ಸಾವಿನ ಕಾರಣಗಳನ್ನು ಮಾತ್ರ ದೃಢಪಡಿಸಬೇಕಿದೆ.
ಧನಿಕೋರ್ತಾದಲ್ಲಿ ಸರಣಿ ಸಾವು ಸಂಭವಿಸುತ್ತಿರುವ ಸುದ್ದಿ ಆಡಳಿತ ಯಂತ್ರವನ್ನು ತಲುಪಲು ಸಾಕಷ್ಟು ವಿಳಂಬವಾಗಿದೆ. ಸುದ್ದಿ ತಿಳಿದ ಬಳಿಕ ಆರೋಗ್ಯಾಧಿಕಾರಿಗಳ ತಂಡ ಜಿಲ್ಲಾಕೇಂದ್ರದಿಂದ ಸುಮಾರು 30 ಕಿಲೋಮೀಟರ್ ದೂರದ ಗ್ರಾಮಕ್ಕೆ ಧಾವಿಸಿದೆ. ನಿಗೂಢ ಕಾಯಿಲೆಗೆ ಬಲಿಯಾದ ಬಹುತೇಕ ಎಲ್ಲರಿಗೂ ಸಾವಿಗೆ ಮುನ್ನ ಎದೆನೋವು ಕಾಣಿಸಿಕೊಂಡಿದೆ ಹಾಗೂ ತೀವ್ರ ಕಫದ ಸಮಸ್ಯೆ ಉಲ್ಬಣಿಸಿದೆ ಎಂದು ಮೂಲಗಳು ಹೇಳಿವೆ.
ಒಡಿಶಾ ಗಡಿಭಾಗದಲ್ಲಿರುವ ಈ ಪುಟ್ಟ ಉಪಗ್ರಾಮದಲ್ಲಿ ಬಹುತೇಕ ಪ್ರತಿ ಕುಟುಂಬದವರೂ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಮತ್ತು ಗ್ರಾಮಸ್ಥರು ಭಯಭೀತರಾಗಿದ್ದಾರೆ ಎಂದು ಮೂಲಗಳು ವಿವರಿಸಿವೆ.
"ಇತ್ತೀಚಿನ ದಿನಗಳಲ್ಲಿ ಐದು ಸಾವುಗಳು ಸಂಭವಿಸಿವೆ. ಜಿಲ್ಲಾಸ್ಪತ್ರೆಯಲ್ಲಿ ಮೂವರು ವಯೋಸಂಬಂಧಿ ಅಸ್ವಸ್ಥತೆಗಳಿಂದ ಮೃತಪಟ್ಟಿದ್ದಾರೆ ಮತ್ತು ಇತರ ಎರಡು ಸಾವಿನ ಪ್ರಕರಣಗಳ ಕಾರಣ ದೃಢಪಟ್ಟಿಲ್ಲ" ಎಂದು ಸುಕ್ಮಾ ಮುಖ್ಯ ವೈದ್ಯಾಧಿಕಾರಿ ಡಾ.ಕಪಿಲ್ ದೇವ್ ಕಶ್ಯಪ್ ಹೇಳಿದ್ದಾರೆ.
"ನಮ್ಮ ವೈದ್ಯರ ತಂಡ ಕಂಡುಕೊಂಡಂತೆ ಸಾವಿಗೆ ಪ್ರಮುಖ ಕಾರಣ ಮಹೂವಾ ಕಟಾವಿನ ಸಮಯದಲ್ಲಿ ಉಂಟಾದ ಹವಾಮಾನದಲ್ಲಿನ ದಿಢೀರ್ ಬದಲಾವಣೆ. ಗ್ರಾಮಸ್ಥರು ಸಾಮಾನ್ಯವಾಗಿ ಮಹೂವಾ ಸಂಗ್ರಹಿಸಲು ದಿನವಿಡೀ ಕಾಡಿನಲ್ಲಿ ಇರುತ್ತಾರೆ. ಇದು ದೇಹದಲ್ಲಿ ನೀರಿನ ಅಂಶದ ಕೊರತೆಗೆ ಕಾರಣವಾಗುತ್ತದೆ ಮತ್ತು ಜನ ಅಸ್ವಸ್ಥರಾಗುತ್ತಿದ್ದಾರೆ" ಎಂದು ಅವರು ವಿವರಿಸಿದ್ದಾರೆ.
ಮಹೂವಾ ಸಂಗ್ರಹಿಸಲು ಕಾಡಿಗೆ ತೆರಳುತ್ತಿರುವ ಗ್ರಾಮಸ್ಥರಿಗೆ ಓಆರ್ಎಸ್ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.







