ಛತ್ತೀಸ್ಗಡ | ಕಾಂಗ್ರೆಸ್ ನಾಯಕನ ಕಚೇರಿಯ ಮೇಲೆ ಗುಂಡಿನ ದಾಳಿ,ಇಬ್ಬರಿಗೆ ಗಾಯ

ಸಾಂದರ್ಭಿಕ ಚಿತ್ರ
ಬಿಲಾಸಪುರ,ಅ.29: ಛತ್ತೀಸ್ ಗಡದ ಬಿಲಾಸಪುರ ಜಿಲ್ಲೆಯಲ್ಲಿ ಮೂವರು ಅಪರಿಚಿತ ದುಷ್ಕರ್ಮಿಗಳು ಕಾಂಗ್ರೆಸ್ ನಾಯಕರೋರ್ವರ ಖಾಸಗಿ ಕಚೇರಿಯ ಹೊರಗೆ ಯದ್ವಾತದ್ವಾ ಗುಂಡಿನ ದಾಳಿಯನ್ನು ನಡೆಸಿದ್ದು,ಇಬ್ಬರು ಗಾಯಗೊಂಡಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.
ಮಂಗಳವಾರ ಸಂಜೆ ಆರು ಗಂಟೆಯ ಸುಮಾರಿಗೆ ಮಸ್ತುರಿ ಪಟ್ಟಣದಲ್ಲಿ ಸ್ಥಳೀಯ ಕಾಂಗ್ರೆಸ್ ಜನಪದ ಉಪಾಧ್ಯಕ್ಷ ನಿತೇಶ ಸಿಂಗ್ ಅವರು ತನ್ನ ಕಚೇರಿಯಲ್ಲಿದ್ದಾಗ ಈ ಘಟನೆ ನಡೆದಿದೆ.
ಬೈಕ್ ನಲ್ಲಿ ಆಗಮಿಸಿದ್ದ ಮೂವರು ಮುಸುಕುಧಾರಿ ವ್ಯಕ್ತಿಗಳು ಏಕಾಏಕಿ ಕಚೇರಿಯತ್ತ ಗುಂಡಿನ ದಾಳಿ ನಡೆಸಿದ್ದರು. 10-12 ಸುತ್ತು ಗುಂಡುಗಳನ್ನು ಹಾರಿಸಲಾಗಿದ್ದು,ಸಿಂಗ್ ಗಾಯಗೊಳ್ಳದೆ ಪಾರಾಗಿದ್ದರೆ ಅವರ ಚಿಕ್ಕಪ್ಪ ಚಂದ್ರಕಾಂತ ಸಿಂಗ ಠಾಕೂರ್ ಮತ್ತು ಸೋದರ ರಾಜು ಸಿಂಗ್ ಗಾಯಗೊಂಡಿದ್ದಾರೆ. ದಾಳಿಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೋಲಿಸ್ ಅಧಿಕಾರಿ ತಿಳಿಸಿದರು.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದರು.
ಪ್ರಾಥಮಿಕ ಮಾಹಿತಿಯ ಪ್ರಕಾರ ಇಬ್ಬರು ದಾಳಿಕೋರರು ಪಿಸ್ತೂಲುಗಳು ಅಥವಾ ನಾಡ ಶಸ್ತ್ರಾಸ್ತ್ರಗಳಿಂದ ಸಜ್ಜಿತರಾಗಿದ್ದರು. ದಾಳಿಕೋರರಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.





