Chhattisgarh | ಮನೆಗೆ ನುಗ್ಗಿ ಗುಂಡಿನ ದಾಳಿ: ಕಾಂಗ್ರೆಸ್ ನಾಯಕನ ಪುತ್ರ ಸಾವು

ಸಾಂದರ್ಭಿಕ ಚಿತ್ರ | Photo Credit : AI
ರಾಯಪುರ: ಛತ್ತೀಸ್ಗಢದ ಜಾಂಜ್ಗಿರ್-ಚಾಂಪಾ ಜಿಲ್ಲೆಯಲ್ಲಿ ಮೂವರು ಮುಸುಕುಧಾರಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಗುಂಡು ಹಾರಿಸಿದ ಪರಿಣಾಮ ಸ್ಥಳೀಯ ಕಾಂಗ್ರೆಸ್ ನಾಯಕನ ಪುತ್ರ ಸಾವನ್ನಪ್ಪಿದ್ದು, ಇನ್ನೊಬ್ಬ ಪುತ್ರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಬಿರ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಹಿ ಗ್ರಾಮದಲ್ಲಿ ಅಪರಾಹ್ನ ಸುಮಾರು 12.30ಕ್ಕೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೋಟಾರುಸೈಕಲ್ನಲ್ಲಿ ಆಗಮಿಸಿದ ಮುಸುಕುದಾರಿ ದಾಳಿಕೋರರು ಸಿಮೆಂಟ್-ಮರಳು ವ್ಯಾಪಾರಿ ಮತ್ತು ಕಾಂಗ್ರೆಸ್ ಬ್ಲಾಕ್ ಘಟಕದ ಮಾಜಿ ಉಪಾಧ್ಯಕ್ಷ ಸಮ್ಮೆಲಾಲ್ ಕಶ್ಯಪ್ ಅವರ ನಿವಾಸಕ್ಕೆ ನುಗಿದ್ದಾರೆ. ಅನಂತರ ಅವರ ಇಬ್ಬರು ಪುತ್ರರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಜಾಂಜ್ಗಿರ್-ಚಾಂಪಾ ಹೆಚ್ಚುವರಿ ಪೊಲೀಸ್ ವರಿಷ್ಠ ಉಮೇಶ್ ಕಶ್ಯಪ್ ತಿಳಿಸಿದ್ದಾರೆ.
ಗುಂಡಿನ ದಾಳಿಯಿಂದ ಆಯುಷ್ ಕಶ್ಯಪ್ (19) ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಕಿರಿಯ ಸಹೋದರ ಅಶುತೋಷ್ (16) ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿದೆ. ಅವರ ಪರಿಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ಹಿಂದಿನ ಕಾರಣ ಏನು ಎಂಬುದು ಇದುವರೆಗೆ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.




