ಚತ್ತೀಸ್ಗಢ| ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟ ಪ್ರಕರಣ: ವೇದಾಂತ ಗ್ರೂಪ್ ಅಧ್ಯಕ್ಷ ಅನಿಲ್ ಅಗರ್ವಾಲ್ ವಿರುದ್ಧ ಪ್ರಕರಣ ದಾಖಲು

Photo| PTI
ರಾಯ್ಪುರ: ಚತ್ತೀಸ್ಗಢದ ಶಕ್ತಿ ಜಿಲ್ಲೆಯ ಸಿಂಘಿತಾರಿ ಗ್ರಾಮದಲ್ಲಿರುವ ವೇದಾಂತ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಚತ್ತೀಸ್ಗಢ ಪೊಲೀಸರು ಗುರುವಾರ ವೇದಾಂತ ಗ್ರೂಪ್ ಅಧ್ಯಕ್ಷ ಅನಿಲ್ ಅಗರ್ವಾಲ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಪ್ರಿಲ್ 14 ರಂದು ಮಧ್ಯಾಹ್ನ 2.30ರ ಸುಮಾರಿಗೆ ವೇದಾಂತ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ನಿಂದ ಟರ್ಬೈನ್ಗೆ ಹೆಚ್ಚಿನ ಒತ್ತಡದ ಉಗಿಯನ್ನು ಸಾಗಿಸುವ ಟ್ಯೂಬ್ ಸ್ಫೋಟಗೊಂಡಿದೆ. ಈ ವೇಳೆ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಗಂಭೀರವಾದ ಸುಟ್ಟ ಗಾಯಗಳಾಗಿತ್ತು. ಘಟನೆಯಲ್ಲಿ 20 ಮಂದಿ ಮೃತಪಟ್ಟಿದ್ದರು ಮತ್ತು 16 ಜನರು ಗಾಯಗೊಂಡಿದ್ದರು.
"ವೇದಾಂತ ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ವೇದಾಂತ ಗ್ರೂಪ್ ಅಧ್ಯಕ್ಷ ಅನಿಲ್ ಅಗರ್ವಾಲ್ ಮತ್ತು ಇತರರ ವಿರುದ್ಧ ದಬ್ರಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ವೇಳೆ ಹೆಚ್ಚಿನ ವ್ಯಕ್ತಿಗಳು ಹೊಣೆಗಾರರು ಎಂದು ಕಂಡು ಬಂದಲ್ಲಿ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು" ಎಂದು ಶಕ್ತಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪ್ರಫುಲ್ ಠಾಕೂರ್ ತಿಳಿಸಿದ್ದಾರೆ.




