Chattisgarh | ದಸರಾ ಆಯುಧ ಪೂಜೆಯಲ್ಲಿ ಎಕೆ-47ನಿಂದ ಗುಂಡು ಹಾರಿಸಿದ ಐಪಿಎಸ್ ಅಧಿಕಾರಿ!

Photo: x.com/JagranNews
ರಾಯಪುರ: ದಸರಾ ಆಚರಣೆಯ ಅಂಗವಾಗಿ ನಡೆದ ಆಯುಧ ಪೂಜೆಯಲ್ಲಿ AK-47 ರೈಫಲ್ ನಿಂದ ಹಲವು ಸುತ್ತು ಗುಂಡು ಹಾರಿಸಿದ ಛತ್ತೀಸ್ಗಢದ IPS ಅಧಿಕಾರಿ ಅಂಕಿತಾ ಶರ್ಮಾ ಅವರ ನಡೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಅವರ ಕ್ರಮವನ್ನು ಪ್ರಶ್ನಿಸಿದರೆ, ಇನ್ನು ಕೆಲವರು ಅದನ್ನು ಅಧಿಕೃತ ಧಾರ್ಮಿಕ ಆಚರಣೆಯ ಭಾಗ ಎಂದು ಸಮರ್ಥಿಸಿಕೊಂಡಿದ್ದಾರೆ.
ರಾಜನಂದಗಾಂವ್ ಪೊಲೀಸ್ ಲೈನ್ಸ್ ನಲ್ಲಿ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ನಡೆದ ಆಯುಧ ಪೂಜೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
‘ಎಲ್ಲವನ್ನೂ ಜಾತಿ ವಿವಾದವನ್ನಾಗಿ ಪರಿವರ್ತಿಸುವ ಮೊದಲು ಸತ್ಯಾಂಶಗಳನ್ನು ತಿಳಿದುಕೊಳ್ಳಿ. ಇದು ಸಾರ್ವಜನಿಕ ಸಮಾರಂಭದಲ್ಲಿ ನಡೆದ ಘಟನೆಯಲ್ಲ; ಅಧಿಕೃತ ದಸರಾ ಆಯುಧ ಪೂಜೆಯ ಸಂದರ್ಭದಲ್ಲಿ ನಡೆದಿದೆ. ಅಂಕಿತಾ ಶರ್ಮಾ ಅವರು ಎಕೆ-47ನಿಂದ ಗುಂಡು ಹಾರಿಸಿರುವುದು ನಿಜ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಘಟನೆಯನ್ನು ಮುಂದಿಟ್ಟುಕೊಂಡು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸೂರಜ್ ಕುಮಾರ್ ಬೌದ್ಧ್, ಮಾಧ್ಯಮಗಳ ವರದಿಗಾರಿಕೆಯನ್ನೂ ಜಾತಿ ರಾಜಕೀಯವನ್ನೂ ಟೀಕಿಸಿದ್ದಾರೆ.
‘ಇದು ಎಂತಹ ಪ್ರಜಾಸತ್ತಾತ್ಮಕ ವ್ಯವಸ್ಥೆ? ದುರದೃಷ್ಟವಶಾತ್, 'ಮಾಧ್ಯಮ’ ಅವರನ್ನು ‘ಲೇಡಿ ಸಿಂಘಂ’ ಎಂದು ಕರೆಯುತ್ತಿದೆ. ಸವರ್ಣೀಯರು ತಮ್ಮ ಒಗ್ಗಟ್ಟನ್ನು ಹೀಗೆ ಪ್ರದರ್ಶಿಸುತ್ತಾರೆ’ ಎಂದು ಅವರು ಬರೆದಿದ್ದಾರೆ.
‘ಇದಕ್ಕೆ ಅನುಮತಿಯಿದೆಯೇ?’ ಎಂದು ಜನರು ಪ್ರಶ್ನಿಸಿದ್ದಾರೆ. ‘ಅವರು ಕಾನೂನುಬಾಹಿರವಾಗಿ ನಡೆದುಕೊಂಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾನೂನುಬಾಹಿರವಾಗಿ ಏನನ್ನೂ ಮಾಡಿಲ್ಲ ಎಂದಾದರೆ ಸುಮ್ಮನಿರುವುದು ಒಳಿತು. ಇಷ್ಟ-ಕಷ್ಟಗಳಿಗೂ ವಾಸ್ತವಕ್ಕೂ ವ್ಯತ್ಯಾಸವಿದೆ’ ಎಂದು ಭರತ್ ಎಸ್ ಎಂಬವರು ಅಭಿಪ್ರಾಯಪಟ್ಟಿದ್ದಾರೆ.
ಬಂದೂಕು ಬಳಕೆಯ ಸುರಕ್ಷತಾ ಕ್ರಮಗಳ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ‘ನಾನು ನಿಯಮಿತವಾಗಿ ಬಂದೂಕು ಬಳಸುತ್ತೇನೆ. ಪ್ರತಿ ಎರಡು ವಾರಕ್ಕೊಮ್ಮೆ ಶೂಟಿಂಗ್ ರೇಂಜ್ ಗೆ ಹೋಗುತ್ತೇನೆ. ಅಲ್ಲಿ ಬಂದೂಕಿನ ನಳಿಕೆಯನ್ನು ನೆಲಕ್ಕೆ ಸಮಾನಾಂತರವಾಗಿ ಇಡಬಾರದು ಎಂದು ಮೊದಲಿಗೆ ಕಲಿಸಲಾಗುತ್ತದೆ. ಆಕಸ್ಮಿಕವಾಗಿ ಗುಂಡು ಹಾರುವುದನ್ನು ತಪ್ಪಿಸಲು ನಳಿಕೆಯನ್ನು ಮೇಲ್ಮುಖವಾಗಿ ಅಥವಾ ಕೆಳಮುಖವಾಗಿ ಇಡಬೇಕು. ಬಂದೂಕು ಖಾಲಿಯಾಗಿದ್ದರೂ ಇದೇ ನಿಯಮ ಪಾಲಿಸಬೇಕು. ಇವರು ಎಂತಹ ಐಪಿಎಸ್ ಅಧಿಕಾರಿ?’ ಎಂದು ಯುರೇಕಾ ಗುಪ್ತಾ ಪ್ರಶ್ನಿಸಿದ್ದಾರೆ.
'ನಾಗರಿಕ ಸೇವಾ ನಡವಳಿಕೆ ನಿಯಮಗಳ ಉಲ್ಲಂಘನೆಗಾಗಿ ಅವರನ್ನು ಅಮಾನತುಗೊಳಿಸಬೇಕು’ ಎಂದು ಒಬ್ಬರು ಆಗ್ರಹಿಸಿದ್ದಾರೆ.
ಇನ್ನೊಬ್ಬರು, ‘ಈಗ ಐಎಎಸ್ (IAS) ಮತ್ತು ಐಪಿಎಸ್ (IPS) ವ್ಯವಸ್ಥೆಯನ್ನು ರದ್ದುಗೊಳಿಸಿ, ನಾಗರಿಕ ಸ್ನೇಹಿ ಕೇಡರ್ ವ್ಯವಸ್ಥೆಯನ್ನು ಜಾರಿಗೆ ತರುವ ಸಮಯ ಬಂದಿದೆ. ನಮಗೆ ‘ಸಿಂಘಂ’ ಚಲನಚಿತ್ರದ ಪಾತ್ರದ ರೀತಿಯ ಅಧಿಕಾರಿಗಳು ಬೇಕಿಲ್ಲ’ ಎಂದು ಟೀಕಿಸಿದ್ದಾರೆ.






