Chhattisgarh | ನಾಯಿಗಳಿಂದ ಜಿಂಕೆಯನ್ನು ರಕ್ಷಿಸಿ, ಕೊಂದು ತಿಂದ ಗ್ರಾಮಸ್ಥರು; ಐವರ ಬಂಧನ

PC: x.com/Ilyas_SK_31
ರಾಯಪುರ: ಶ್ವಾನಗಳ ಹಿಂಡಿನಿಂದ ಜಿಂಕೆಯನ್ನು ರಕ್ಷಿಸಲು ಆರಂಭವಾದ ಕಾರ್ಯಾಚರಣೆ ಕೊನೆಗೆ ಜಿಂಕೆಯನ್ನು ಬೇಯಿಸಿ ತಿನ್ನುವಲ್ಲಿಗೆ ಪರ್ಯವಸಾನಗೊಂಡ ಘಟನೆ ವರದಿಯಾಗಿದೆ. ಕೊನೆಗೆ ಬಾಯಿಚಪಲಕ್ಕೆ ಬೆಲೆ ತೆತ್ತಿರುವ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಯಗಢ ಅರಣ್ಯ ವಿಭಾಗದ ದಲೇರಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪಕ್ಕದ ಅರಣ್ಯದಿಂದ ನೀರು ಹಾಗೂ ಆಹಾರ ಹುಡುಕುತ್ತಾ ಬಂದ ಜಿಂಕೆಯೊಂದು ಗ್ರಾಮದಲ್ಲಿ ಕಾಣಿಸಿಕೊಂಡಿದೆ. ಗ್ರಾಮದಲ್ಲಿ ಕಂಡ ಜಿಂಕೆಯನ್ನು ನಾಯಿಗಳು ಅಟ್ಟಿಸಿಕೊಂಡು ಹೋಗಿ ಗಾಯಗೊಳಿಸಿವೆ. ಆದರೆ ಜಿಂಕೆಯ ರಕ್ಷಣೆಗೆ ಬಂದ ಗ್ರಾಮಸ್ಥರು ನಾಯಿಯನ್ನು ಓಡಿಸಿ, ಗಾಯಗೊಂಡ ಜಿಂಕೆಯನ್ನು ರಕ್ಷಿಸಿದ್ದಾರೆ. ಬಳಿಕ ಜಿಂಕೆಯನ್ನು ಕೊಂದು ಮಾಂಸವನ್ನು ಹಂಚಿಕೊಂಡು ಸೇವಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
ಹಲವು ಮನೆಗಳಲ್ಲಿ ಜಿಂಕೆ ಮಾಂಸ ಅಡುಗೆ ಮಾಡಿ ಸೇವಿಸಿದ ಬಗಗೆ ಸುಳಿವು ಸಿಕ್ಕಿದ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಐದು ಮನೆಗಳಿಂದ ಮಾಂಸದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮಾಂಸದ ತುಂಡುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಆರೋಪಿಗಳಾದ ಆತ್ಮಾರಾಮ ರತಿಯಾ, ಮಾಯಾರಾಮ್ ರತಿಯಾ, ಚರಿಚರಣ್ ಸಾವೊ, ತರುಣ್ ಅಗಾರಿಯಾ ಮತ್ತು ಮೋದಿಲಾಲ್ ಅಗಾರಿಯಾ ಅವರನ್ನು ಬಂಧಿಸಲಾಗಿದ್ದು, ಇವರು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.






