ಆಪರೇಷನ್ ಬ್ಲೂ ಸ್ಟಾರ್ ತಪ್ಪು ನಿರ್ಧಾರವಾಗಿತ್ತು, ಅದಕ್ಕಾಗಿ ಇಂದಿರಾ ಗಾಂಧಿ ತನ್ನ ಜೀವವನ್ನೇ ತೆತ್ತರು : ಮಾಜಿ ಸಚಿವ ಪಿ.ಚಿದಂಬರಂ

photo: PTI
ಕಸೌಲಿ(ಹಿಮಾಚಲ ಪ್ರದೇಶ),ಅ.12: ಪಂಜಾಬಿನ ಸ್ವರ್ಣ ಮಂದಿರವನ್ನು ಮರಳಿ ಪಡೆಯಲು ‘ಆಪರೇಷನ್ ಬ್ಲೂ ಸ್ಟಾರ್’ ತಪ್ಪು ನಿರ್ಧಾರವಾಗಿತ್ತು ಎಂದು ಬಣ್ಣಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು, ಅದಕ್ಕಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತನ್ನ ಜೀವವನ್ನೇ ತೆರುವಂತಾಯಿತು ಎಂದು ಹೇಳಿದ್ದಾರೆ.
ಇಲ್ಲಿ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಯಾವುದೇ ಸೇನಾ ಅಧಿಕಾರಿಗಳಿಗೆ ಅಗೌರವ ತೋರದೇ ಹೇಳುವುದಾದರೆ, ‘ಸ್ವರ್ಣ ಮಂದಿರವನ್ನು ಮರಳಿ ಪಡೆಯಲು ಅದು ತಪ್ಪು ಮಾರ್ಗವಾಗಿತ್ತು. ಕೆಲವು ವರ್ಷಗಳ ಬಳಿಕ ನಾವು ಸೇನೆಯನ್ನು ಹೊರಗಿಟ್ಟು ಅದನ್ನು ಮರಳಿ ಪಡೆಯುವ ಮೂಲಕ ಸರಿಯಾದ ಮಾರ್ಗವನ್ನು ತೋರಿಸಿದ್ದೇವೆ. ಆಪರೇಷನ್ ಬ್ಲೂ ಸ್ಟಾರ್ ತಪ್ಪು ಮಾರ್ಗವಾಗಿತ್ತು. ಆ ತಪ್ಪಿಗೆ ಇಂದಿರಾ ಗಾಂಧಿಯವರು ತನ್ನ ಜೀವವನ್ನೇ ತೆತ್ತರು ಎಂದು ನಾನು ಒಪ್ಪಿಕೊಳ್ಳುತ್ತೇನೆ ’ ಎಂದರು.
ಜೂನ್,1984ರಲ್ಲಿ ಅಮೃತಸರದ ಸ್ವರ್ಣ ಮಂದಿರದಿಂದ ಭಯೋತ್ಪಾದಕರನ್ನು ಹೊರಹಾಕಲು ನಡೆಸಲಾಗಿದ್ದ ಸೇನಾ ಕಾರ್ಯಾಚರಣೆಯ ಕುರಿತು ಮಾತನಾಡುತ್ತಿದ್ದ ಚಿದಂಬರಂ ಆ ನಿರ್ಧಾರ ಇಂದಿರಾ ಗಾಂಧಿ ಅವರೊಬ್ಬರದೇ ಆಗಿರಲಿಲ್ಲ ಎಂದು ಸ್ಪಷ್ಟ ಪಡಿಸಿದರು.
ಅದು ಪೋಲಿಸ್, ಗುಪ್ತಚರ ಇಲಾಖೆ ಮತ್ತು ನಾಗರಿಕ ಸೇವೆಯ ಸಂಯೋಜಿತ ನಿರ್ಧಾರವಾಗಿತ್ತು. ಅದಕ್ಕಾಗಿ ನೀವು ಇಂದಿರಾ ಗಾಂಧಿಯವರನ್ನು ಮಾತ್ರ ದೂರಲು ಸಾಧ್ಯವಿಲ್ಲ ಎಂದರು.
ಇಂದಿನ ಪಂಜಾಬ್ ಕುರಿತು ಮಾತನಾಡಿದ ಚಿದಂಬರಂ, ‘ನಾನು ಅಲ್ಲಿಗೆ ಭೇಟಿ ನೀಡಿದಾಗ ಖಾಲಿಸ್ತಾನ್ಗಾಗಿ ಅಥವಾ ಪ್ರತ್ಯೇಕತೆಯ ಕೂಗುಗಳು ಬಹುತೇಕ ತಣ್ಣಗಾಗಿವೆ. ಆದರೆ ಆರ್ಥಿಕ ಸಮಸ್ಯೆ ರಾಜ್ಯದ ಪ್ರಮುಖ ಸಮಸ್ಯೆಯಾಗಿ ಹೊರಹೊಮ್ಮಿದೆ ಎಂದು ನನಗೆ ಅನ್ನಿಸಿದೆ. ಹೆಚ್ಚಿನ ಅಕ್ರಮ ವಲಸಿಗರು ಪಂಜಾಬಿನವರೇ ಆಗಿದ್ದಾರೆ ’ಎಂದರು.
ಆಪರೇಷನ್ ಬ್ಲೂ ಸ್ಟಾರ್
ಆಪರೇಷನ್ ಬ್ಲೂ ಸ್ಟಾರ್ 1984ರ ಜೂ.1ರಿಂದ ಜೂ.8ರವರೆಗೆ ನಡೆದಿತ್ತು. ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ಸರಕಾರವು ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ನೇತೃತ್ವದ ಪ್ರತ್ಯೇಕತಾವಾದಿ ಬಂಡಾಯವನ್ನು ದಮನಿಸಲು ಈ ಕ್ರಮವನ್ನು ಕೈಗೊಂಡಿತ್ತು. ಭಿಂದ್ರನ್ವಾಲೆ ಮತ್ತು ಆತನ ಬೆಂಬಲಿಗರು ಸ್ವರ್ಣಮಂದಿರ ಸಂಕೀರ್ಣದ ಅಕಾಲ್ ತಖ್ತ್ ಮತ್ತು ಇತರ ಕಡೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದರು. ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರು, ಯೋಧರು ಮತ್ತು ನಾಗರಿಕರು ಸೇರಿದಂತೆ ನೂರಾರು ಜನರು ಮೃತಪಟ್ಟಿದ್ದರು. ಈ ದಾಳಿಯು ಸಿಖ್ ಸಮುದಾಯಕ್ಕೆ ತೀವ್ರ ನೋವನ್ನುಂಟು ಮಾಡಿತ್ತು ಮತ್ತು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಕಾರ್ಯಾಚರಣೆಯ ಪರಿಣಾಮಗಳು ತಕ್ಷಣದ್ದಾಗಿದ್ದವು ಮತ್ತು ತೀವ್ರವಾಗಿದ್ದವು. ಸ್ವರ್ಣ ಮಂದಿರದ ಮೇಲಿನ ದಾಳಿಗೆ ಪ್ರತೀಕಾರವಾಗಿ ಅ.31,1984ರಂದು ಇಂದಿರಾ ಗಾಂಧಿಯವರ ಸಿಖ್ ಅಂಗರಕ್ಷಕರೇ ಅವರನ್ನು ಹತ್ಯೆ ಮಾಡಿದ್ದರು. ಇದು ದೇಶಾದ್ಯಂತ ಸಿಖ್ ವಿರೋಧಿ ದಂಗೆಗಳಿಗೆ ಕಾರಣವಾಗಿದ್ದು, ಸಾವಿರಾರು ಸಿಖ್ಖರು ಹತ್ಯೆಯಾಗಿದ್ದರು.







