ತಮಿಳುನಾಡಿನಲ್ಲಿ 6.5 ಲಕ್ಷ ʼವಲಸೆ ಕಾರ್ಮಿಕರನ್ನುʼ ಮತದಾರರನ್ನಾಗಿ ಸೇರಿಸಲಾಗಿದೆ: ಬಿಹಾರ ಎಸ್ಐಆರ್ ವಿವಾದದ ನಡುವೆ ಪಿ.ಚಿದಂಬರಂ ಆರೋಪ

ಪಿ.ಚಿದಂಬರಂ (Photo: PTI)
ಹೊಸದಿಲ್ಲಿ: ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್)ಯ ವಿವಾದದ ನಡುವೆ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಪಿ.ಚಿದಂಬರಂ ಅವರು ತಮಿಳುನಾಡಿನಲ್ಲಿ 6.5 ಲಕ್ಷ ʼವಲಸೆ ಕಾರ್ಮಿಕರನ್ನುʼ ಮತದಾರರನ್ನಾಗಿ ಸೇರಿಸಲಾಗಿದ್ದು,ಇದು ಆತಂಕಕಾರಿ ಮತ್ತು ಕಾನೂನುಬಾಹಿರವಾಗಿದೆ ಎಂದು ಆರೋಪಿಸಿದ್ದಾರೆ.
ಚುನಾವಣಾ ಆಯೋಗವು ರಾಜ್ಯಗಳಲ್ಲಿ ಚುನಾವಣೆ ಸ್ವರೂಪವನ್ನು ಬದಲಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಅವರು, ಬಿಹಾರದಲ್ಲಿ ಎಸ್ಐಆರ್ ಪ್ರಕ್ರಿಯೆ ಕುರಿತು ಕುತೂಹಲ ದಿನೇದಿನೇ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.
ಶಾಶ್ವತವಾಗಿ ವಲಸೆ ಹೋಗಿರುವ ಅಥವಾ ಪತ್ತೆಯಾಗದ 36 ಲಕ್ಷ ಮತದಾರರು ಸೇರಿದಂತೆ ಬಿಹಾರದ ಕರಡು ಮತದಾರರ ಪಟ್ಟಿಗಳಿಂದ 65 ಲಕ್ಷ ಮತದಾರರನ್ನು ಕೈಬಿಟ್ಟಿರುವ ಚುನಾವಣಾ ಆಯೋಗದ ಕ್ರಮವು ಚಿದಂಬರಂ ವಾದದ ಕೇಂದ್ರಬಿಂದುವಾಗಿದೆ.
ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.
ಬಿಹಾರದಲ್ಲಿ 65 ಲಕ್ಷ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವ ಅಪಾಯದಲ್ಲಿದ್ದಾರೆ, ಇದೇ ವೇಳೆ ತಮಿಳುನಾಡಿನಲ್ಲಿ 6.5 ಲಕ್ಷ ಜನರನ್ನು ಮತದಾರರನ್ನಾಗಿ ಸೇರಿಸಿರುವ ವರದಿಯು ಆತಂಕಕಾರಿಯಾಗಿದೆ ಮತ್ತು ಸ್ಪಷ್ಟವಾಗಿ ಕಾನೂನುಬಾಹಿರವಾಗಿದೆ ಎಂದು ಚಿದಂಬರಂ ರಾಜ್ಯದ ಮುಖ್ಯಮಂತ್ರಿಗಳ ಕಚೇರಿಯನ್ನು ಟ್ಯಾಗ್ ಮಾಡಿ ಟ್ವೀಟಿಸಿದ್ದಾರೆ.
ವಲಸೆ ಕಾರ್ಮಿಕರನ್ನು ‘ಶಾಶ್ವತವಾಗಿ ವಲಸೆ ಬಂದವರು’ ಎಂದು ಕರೆಯುವುದು ಅವರಿಗೆ ಮಾಡಿದ ಅವಮಾನವಾಗಿದೆ ಮತ್ತು ತಮಿಳುನಾಡಿನ ಮತದಾರರು ತಮ್ಮ ಇಷ್ಟದ ಸರಕಾರವನ್ನು ಆಯ್ಕ ಮಾಡುವ ಹಕ್ಕಿನಲ್ಲಿ ತೀವ್ರ ಹಸ್ತಕ್ಷೇಪವಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.
ಚುನಾವಣಾ ಆಯೋಗದಿಂದ ಅಧಿಕಾರ ದುರುಪಯೋಗದ ಆರೋಪ:
ವಲಸೆ ಕಾರ್ಮಿಕರು ವಿಧಾನಸಭಾ ಚುನಾವಣೆಗಳಲ್ಲಿ ಮತ ಚಲಾಯಿಸಲು ಬಿಹಾರ ಅಥವಾ ತಮ್ಮ ತವರು ರಾಜ್ಯಗಳಿಗೇಕೆ ಮರಳಬಾರದು? ಓರ್ವ ವ್ಯಕ್ತಿಯು ಮತದಾರನಾಗಿ ದಾಖಲಾಗಲು ಸ್ಥಿರವಾದ ಮತ್ತು ಶಾಶ್ವತ ಕಾನೂನುಬದ್ಧ ಮನೆಯನ್ನು ಹೊಂದಿರಬೇಕು. ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಗಳಲ್ಲಿ ಇಂತಹ ಮನೆ ಹೊಂದಿರುತ್ತಾರೆ. ಅವರು ತಮಿಳುನಾಡಿನಲ್ಲಿ ಮತದಾರರಾಗಿ ಹೇಗೆ ದಾಖಲಾಗಬಹುದು? ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
ಬಿಹಾರದಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ಕಟುವಾಗಿ ಟೀಕಿಸಿರುವ ಅವರು ಚುನಾವಣಾ ಆಯೋಗವು ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ರಾಜಕೀಯವಾಗಿ ಮತ್ತು ಕಾನೂನುಬದ್ಧವಾಗಿ ಇದರ ವಿರುದ್ಧ ಹೋರಾಡಬೇಕು ಎಂದು ಪ್ರತಿಪಾದಿಸಿದ್ದಾರೆ.
ತಮಿಳುನಾಡಿನ ಮತದಾರರ ಪಟ್ಟಿಗಳಲ್ಲಿ ‘ಅತಿಥಿ ಕಾರ್ಮಿಕರ’ಸೇರ್ಪಡೆಯನ್ನು ಆಡಳಿತಾರೂಢ ಡಿಎಂಕೆ ಮತ್ತು ಇತರ ಪ್ರಾದೇಶಿಕ ಪಕ್ಷಗಳೂ ವಿರೋಧಿಸಿವೆ.
The SIR exercise is getting curiouser and curiouser
— P. Chidambaram (@PChidambaram_IN) August 3, 2025
While 65 lakh voters are in danger of being disenfranchised in Bihar, reports of "adding" 6.5 lakh persons as voters in Tamil Nadu is alarming and patently illegal
Calling them "permanently migrated" is an insult to the…







