ಪ್ರಧಾನಿ ಮೋದಿ ಆಯೋಜಿಸಿದ್ದ ಭವ್ಯ ಔತಣಕೂಟಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಗೈರು; ಕಾರಣವೇನು?

Photo credit: PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ ಆಯೋಜಿಸಿದ್ದ ಬ್ರಿಕ್ಸ್ (BRICS) ನಾಯಕರು ಹಾಗೂ ಇತರ ಗಣ್ಯರ ಭವ್ಯ ಔತಣಕೂಟಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಗೈರಾಗಿದ್ದರು.
ದಿಲ್ಲಿಯ ‘ಭಾರತ ಮಂಟಪ’ದಲ್ಲಿ ನಡೆದ ಔತಣಕೂಟದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಬ್ರಿಕ್ಸ್ ನ ಹಲವು ನಾಯಕರು ಹಾಗೂ ಗಣ್ಯರು ಪಾಲ್ಗೊಂಡಿದ್ದರು. ಕ್ಸಿ ಅವರ ಗೈರಿಗೆ ನಿಖರ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ. ವಿಶ್ರಾಂತಿ ಪಡೆಯಲು ಕ್ಸಿ ತಮ್ಮ ಹೋಟೆಲ್ಗೆ ಮರಳಿದ್ದರು ಎಂದು ಮೂಲವೊಂದು ತಿಳಿಸಿದೆ.
ಶನಿವಾರ ಮಧ್ಯಾಹ್ನ ಹೊಸದಿಲ್ಲಿಗೆ ಬಂದಿದ್ದ ಕ್ಸಿ, ಬ್ರಿಕ್ಸ್ ಶೃಂಗಸಭೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಎರಡು ದಿನಗಳ ಶೃಂಗಸಭೆಯ ಮೊದಲ ದಿನವೇ ಮೋದಿ ಆಯೋಜಿಸಿದ್ದ ಉನ್ನತ ಮಟ್ಟದ ಔತಣಕೂಟಕ್ಕೆ ಅವರು ಗೈರಾಗಿರುವುದು ಗಮನ ಸೆಳೆಯಿತು.
ಹಗಲಿನಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ಬಳಿಕ ತವರಿಗೆ ಮರಳಿದ ಅಬುಧಾಬಿ ಕ್ರೌನ್ ಪ್ರಿನ್ಸ್ ಶೇಖ್ ಖಾಲಿದ್ ಬಿನ್ ಮುಹಮ್ಮದ್ ಕೂಡ ಔತಣಕೂಟದಲ್ಲಿ ಪಾಲ್ಗೊಂಡಿರಲಿಲ್ಲ.
ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್, ಅಶ್ವಿನಿ ವೈಷ್ಣವ್ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಹಾಜರಿದ್ದರು.
ಮುಖ್ಯಮಂತ್ರಿಗಳಾದ ಆದಿತ್ಯನಾಥ್, ದೇವೇಂದ್ರ ಫಡ್ನವೀಸ್, ಸುವೇಂದು ಅಧಿಕಾರಿ ಹಾಗೂ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಹಲವು ಮುಖ್ಯಮಂತ್ರಿಗಳು ಮತ್ತು ಇತರ ಹಿರಿಯ ಗಣ್ಯರು ಔತಣಕೂಟದಲ್ಲಿ ಭಾಗವಹಿಸಿದ್ದರು.
VVIP ಔತಣಕೂಟದಲ್ಲಿ ಭಾರತೀಯ ಪಾಕಪದ್ಧತಿಯನ್ನು ಬಿಂಬಿಸುವ ವೈವಿಧ್ಯಮಯ ಸಸ್ಯಾಹಾರಿ ಭಕ್ಷ್ಯಗಳನ್ನು ಬಡಿಸಲಾಯಿತು.
ಆರಂಭಿಕ ಭಕ್ಷ್ಯಗಳಲ್ಲಿ ‘ಖಾಂಡ್ವಿ ಮಿಲ್ಲೆ’ ಮತ್ತು ‘ಕುಂಬ್ ಗಲೌಟಿ’ ಇದ್ದವು. ಮುಖ್ಯ ಭಕ್ಷ್ಯಗಳಲ್ಲಿ ‘ಪನೀರ್ ಲಬಾಬ್ದಾರ್’, ‘ಗುಚ್ಚಿ ಮಾರ್ಮಿಕ್’, ‘ಕ್ಯಾರೆಟ್–ಬೀನ್ ಪೊರಿಯಲ್’ ಹಾಗೂ ಸಿರಿಧಾನ್ಯದ ಪಲಾವ್ ಇದ್ದವು.
ಸಿಹಿ ತಿನಿಸುಗಳಲ್ಲಿ ‘ಓಲ್ಡ್ ಡೆಲ್ಲಿ ಫ್ರೂಟ್ ಕ್ರೀಮ್ ವಿತ್ ಜಲೇಬಿ’ ಮತ್ತು ‘ಶಹತೂತ್ ಫಿರ್ನಿ’ ಸೇರಿದ್ದವು.
ಔತಣಕೂಟದ ವೇಳೆ ಭಾರತ ಸೇರಿದಂತೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ 100ಕ್ಕೂ ಹೆಚ್ಚು ಕಲಾವಿದರ ತಂಡವು ಸಾಂಸ್ಕೃತಿಕ ಕಾರ್ಯಕ್ರಮವನ್ನೂ ನೀಡಿತು.
ಭಾರತವು ಸೆಪ್ಟೆಂಬರ್ 12 ಮತ್ತು 13ರಂದು ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸುತ್ತಿದೆ. 11 ಸದಸ್ಯ ರಾಷ್ಟ್ರಗಳು ಮತ್ತು 10 ಪಾಲುದಾರ ರಾಷ್ಟ್ರಗಳ ನಾಯಕರು ಹಾಗೂ ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.






