ಅಭಿಷೇಕ್ ಬ್ಯಾನರ್ಜಿ ವಿರುದ್ಧ ಅಸಮಾಧಾನ; ‘ನಮ್ಮನ್ನು ಅಥವಾ ಅಭಿಷೇಕ್ ಅವರನ್ನು ಆಯ್ಕೆ ಮಾಡಿ’ ಎಂದು ಮಮತಾಗೆ ಕಲ್ಯಾಣ್ ಬ್ಯಾನರ್ಜಿ ಆಗ್ರಹ

Photo Credit: PTI
ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ‘ಮಮತಾ ದೀದಿ ಈಗ ನಮ್ಮನ್ನು ಅಥವಾ ಅಭಿಷೇಕ್ ಅವರನ್ನು ಆಯ್ಕೆ ಮಾಡಬೇಕು’ ಎಂದು ಹೇಳಿದ್ದಾರೆ.
ನಕಲಿ ಸಹಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಎದುರಿಸುತ್ತಿರುವ ಅಭಿಷೇಕ್ ಬ್ಯಾನರ್ಜಿ ಅವರಿಗೆ ಗುರುವಾರ ಕಲ್ಕತ್ತಾ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ. ಜೊತೆಗೆ, ಸಂಜೆ 6 ಗಂಟೆಯೊಳಗೆ ಸಿಐಡಿ ಮುಂದೆ ಹಾಜರಾಗುವಂತೆ ಸೂಚಿಸಿದೆ.
ಈ ಪ್ರಕರಣದಲ್ಲಿ ಅಭಿಷೇಕ್ ಪರವಾಗಿ ವಾದ ಮಂಡಿಸಲು ಸಿದ್ಧತೆ ನಡೆಸಿದ್ದಾಗ, ಕೊನೆಯ ಕ್ಷಣದಲ್ಲಿ ನನ್ನನ್ನು ವಕೀಲರ ತಂಡದಿಂದ ಕೈಬಿಡಲಾಗಿದೆ. ನನ್ನ ಬದಲಿಗೆ ಹಿರಿಯ ವಕೀಲ ಕಿಶೋರ್ ದತ್ತ ಅವರನ್ನು ನೇಮಿಸಲಾಗಿದೆ ಎಂದು ಮಧ್ಯರಾತ್ರಿ ಮಾಹಿತಿ ನೀಡಲಾಗಿದೆ. ‘ಇದು ನನಗೆ ಅತ್ಯಂತ ಅವಮಾನಕರವಾಗಿದೆ. ಹಿರಿಯರನ್ನು ಹೇಗೆ ಗೌರವಿಸಬೇಕು ಎಂಬುದು ಅಭಿಷೇಕ್ ಅವರಿಗೆ ತಿಳಿದಿಲ್ಲ. ಅವರು ನನ್ನನ್ನು ಎಂದಿಗೂ ನಂಬಿಲ್ಲ. ಅವರ ಅಹಂಕಾರದಿಂದ ಪಕ್ಷಕ್ಕೆ ಹಾನಿಯಾಗಿದೆ’ ಎಂದು ಕಲ್ಯಾಣ್ ಬ್ಯಾನರ್ಜಿ ಹೇಳಿದ್ದಾರೆ.
ನಕಲಿ ಸಹಿ ಪ್ರಕರಣದ ತನಿಖೆ ವೇಳೆ ಸಿಐಡಿ ಅಧಿಕಾರಿಗಳು ನನ್ನ ನಿವಾಸ ಹಾಗೂ ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ಶೋಧ ನಡೆಸಿದಾಗ ನಾನು ಹಾಜರಿದ್ದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ತನಿಖಾ ತಂಡವು ಬಿಜೆಪಿಗೆ ಸಂಬಂಧಿಸಿದ ಇಬ್ಬರು ಸಾಕ್ಷಿಗಳನ್ನು ಏಕೆ ಕರೆತಂದಿತ್ತು ಎಂದು ಪ್ರಶ್ನಿಸಿದ್ದಾರೆ.
ಸಿಐಡಿ ಶೋಧ ಕಾರ್ಯಾಚರಣೆಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಆದರೆ ವಿಚಾರಣೆಗೆ ಮುನ್ನವೇ ಪ್ರಕರಣವನ್ನು ಮತ್ತೊಬ್ಬ ವಕೀಲರಿಗೆ ವಹಿಸಲಾಗಿದೆ ಎಂಬ ಮಾಹಿತಿ ನೀಡಲಾಯಿತು ಎಂದು ಅವರು ಹೇಳಿದ್ದಾರೆ.
ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿರುವ ಕಲ್ಯಾಣ್ ಬ್ಯಾನರ್ಜಿ, ಇನ್ನು ಮುಂದೆ ಅಭಿಷೇಕ್ ಬ್ಯಾನರ್ಜಿ ಪರವಾಗಿ ಯಾವುದೇ ಪ್ರಕರಣದಲ್ಲಿ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ. ‘ನನ್ನನ್ನು ಕಸದ ಬುಟ್ಟಿಯಂತೆ ಪರಿಗಣಿಸಬೇಕೇ?’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದ ತುರ್ತು ವಿಚಾರಣೆಗೆ ಸಂಬಂಧಿಸಿದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ಬುಧವಾರ ತಿರಸ್ಕರಿಸಿತ್ತು.






