Supreme Court ಕಲಾಪಗಳಿಗೂ ತಟ್ಟಿದ ದಿಲ್ಲಿಯ ವಾಯುಮಾಲಿನ್ಯ; 'ಹೈಬ್ರಿಡ್ ಮಾದರಿ' ವಿಚಾರಣೆಗೆ CJI ಸಲಹೆ

ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ವಾಯುಮಾಲಿನ್ಯ ತೀವ್ರ ಹಂತ ತಲುಪಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ವಿಚಾರಣೆಗಳಿಗೆ 'ಹೈಬ್ರಿಡ್' ವಿಧಾನವನ್ನು ಬಳಸಿಕೊಳ್ಳುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ವಕೀಲರು, ಜನರಿಗೆ ಸಲಹೆ ನೀಡಿದ್ದಾರೆ.
ರವಿವಾರ ದಿಲ್ಲಿಯಲ್ಲಿ 461 ವಾಯು ಗುಣಮಟ್ಟ ಸೂಚ್ಯಂಕ (AQI) ದಾಖಲಾಗಿದ್ದು, ಇದು ಈ ಚಳಿಗಾಲದ ಅತ್ಯಂತ ಕಲುಷಿತ ದಿನವಾಗಿದ್ದು, ಡಿಸೆಂಬರ್ನಲ್ಲಿ ದಾಖಲಾದ ಎರಡನೇ ಕೆಟ್ಟ ವಾಯುಮಟ್ಟವಾಗಿದೆ.
ಈ ಸಂಬಂಧ ಸುಪ್ರೀಂ ಕೋರ್ಟ್ ಆಡಳಿತ ರವಿವಾರ ಹೊರಡಿಸಿದ ಸುತ್ತೋಲೆಯಲ್ಲಿ, ಪ್ರಸ್ತುತ ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಅನುಕೂಲಕರವಾದರೆ BAR ಸದಸ್ಯರು ಹಾಗೂ ಜನರು ನ್ಯಾಯಾಲಯಗಳಲ್ಲಿ ಪಟ್ಟಿ ಮಾಡಲಾದ ತಮ್ಮ ಪ್ರಕರಣಗಳಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹೈಬ್ರಿಡ್ ವಿಧಾನದ ಹಾಜರಾತಿಯನ್ನು ಪಡೆಯುವಂತೆ ಸಲಹೆ ನೀಡಿದೆ.
ನ.26ರಂದು ತೀವ್ರ ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆಗಳನ್ನು ಸಂಪೂರ್ಣ ವರ್ಚುವಲ್ ಮೋಡ್ಗೆ ಬದಲಾಯಿಸುವ ಸಾಧ್ಯತೆ ಕುರಿತು ಚರ್ಚೆ ನಡೆಯುವ ವೇಳೆ, ಸಿಜೆಐ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡರು. ಒಂದು ದಿನದ ಮೊದಲು ಒಂದು ಗಂಟೆ ಕಾಲ ನಡಿಗೆಗೆ ಹೋದಾಗ ತಮಗೆ ಅಸ್ವಸ್ಥತೆ ಉಂಟಾಯಿತು ಎಂದು ಅವರು ಹೇಳಿದ್ದರು.
ದುರ್ಬಲ ಗಾಳಿ ಹಾಗೂ ಕಡಿಮೆ ತಾಪಮಾನದಿಂದ ಮಾಲಿನ್ಯಕಾರಕಗಳು ವಾಯುವಿನ ಮೇಲ್ಮೈ ಸಮೀಪದಲ್ಲೇ ಸಿಲುಕಿಕೊಂಡಿದ್ದು, ದಿಲ್ಲಿಯಲ್ಲಿನ ವಾಯು ಗುಣಮಟ್ಟ ದಿನೇದಿನೇ ಹದಗೆಡುತ್ತಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, 401 ರಿಂದ 500ರ ನಡುವಿನ AQI ಅನ್ನು ‘ತೀವ್ರ’ ಎಂದು ವರ್ಗೀಕರಿಸಲಾಗಿದೆ.
ಇಂತಹ ಅಪಾಯಕಾರಿ ಗಾಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಗಂಭೀರ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಮಕ್ಕಳು, ವೃದ್ಧರು ಹಾಗೂ ಉಸಿರಾಟದ ಕಾಯಿಲೆಗಳಿಂದ ಬಳಲುವವರು ಹೆಚ್ಚಿನ ಅಪಾಯದಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆಯ ಆರಂಭದಲ್ಲಿ ಸಿಜೆಐ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಪ್ರಸ್ತುತ ಸುಪ್ರೀಂ ಕೋರ್ಟ್ ಹೈಬ್ರಿಡ್ ವಿಧಾನದ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ವಕೀಲರು ಭೌತಿಕ ಹಾಗೂ ವರ್ಚುವಲ್ ಎರಡೂ ವಿಧಾನಗಳ ಮೂಲಕ ವಿಚಾರಣೆಗಳಲ್ಲಿ ಭಾಗವಹಿಸುವ ವ್ಯವಸ್ಥೆ ಇದೆ. ಇದಕ್ಕೂ ಮೊದಲು, ನ.13ರಂದು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರು ಅಪಾಯಕಾರಿ ವಾಯುಮಾಲಿನ್ಯವನ್ನು ಉಲ್ಲೇಖಿಸಿ, ವಕೀಲರು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವ ಬದಲು ವರ್ಚುವಲ್ ಮೂಲಕ ವಿಚಾರಣೆಗಳಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದ್ದರು.







